ಕಾಪು ಠಾಣೆಯಲ್ಲಿ ಪ್ರಕರಣ ದಾಖಲು

ಕಾಪು: ನ್ಯಾಯಾಲಯದ ನಿರ್ಬಂಧಾಜ್ಞೆ ಇದ್ದರೂ ವಿವಾದಿತ ಜಾಗದಲ್ಲಿ ಕಟ್ಟಡ ನಿರ್ಮಾಣ ಮುಂದುವರಿಸಿ, ಆಕ್ಷೇಪಿಸಿದ ವ್ಯಕ್ತಿಗೆ ಕೈಕಾಲು ಮುರಿಯುವುದಾಗಿ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ಮೂವರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬೆಂಗಳೂರಿನ ಮೀನಾಕ್ಷಿ, ಪೊಲಿಪುವಿನ ಪ್ರವೀಣ್ ಕುಂದರ್ ಹಾಗೂ ಕೈಪುಂಜಾಲಿನ ಕಿರಣ್ ಆಳ್ವ ಎಂದು ಗುರುತಿಸಲಾಗಿದೆ. ಉಡುಪಿ 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಪಿಸಿಆರ್ ಸಂಖ್ಯೆ 81/2025 ಆಧರಿಸಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ಈ ಪ್ರಕರಣ ದಾಖಲಾಗಿದೆ.
ದೂರುದಾರ ದಯಾನಂದ ಸುವರ್ಣ ಅವರು ಕಾಪು ತಾಲೂಕಿನ ಪಡು ಗ್ರಾಮದ ಸರ್ವೆ ನಂ. 66/10ರಲ್ಲಿ ಕುಟುಂಬದೊಂದಿಗೆ ಸ್ಥಿರಾಸ್ತಿ ಹೊಂದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಇದೇ ಸರ್ವೆ ನಂಬರಿನಲ್ಲಿ ಮೊದಲ ಆರೋಪಿ ಮೀನಾಕ್ಷಿ ಕೂಡ ಜಾಗ ಹೊಂದಿದ್ದು, ದೂರುದಾರರ ಆಸ್ತಿಗೆ ಅಕ್ರಮ ಪ್ರವೇಶ ಮಾಡಿ ಯಾವುದೇ ಅನುಮತಿ ಪಡೆಯದೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಕಾಪು ಪುರಸಭೆಗೆ ದೂರು ನೀಡಲಾಗಿದ್ದು, ಪುರಸಭೆಯ ಮುಖ್ಯಾಧಿಕಾರಿ ಮೊದಲ ಆರೋಪಿಗೆ ನೋಟಿಸ್ ನೀಡಿದ್ದರು ಎನ್ನಲಾಗಿದೆ. ಆದರೆ, ನೋಟಿಸ್ಗೆ ಉತ್ತರ ನೀಡದೆ ಕಟ್ಟಡ ಕಾಮಗಾರಿ ಮುಂದುವರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ದೂರುದಾರರು ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿದ್ದು ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿರ್ಬಂಧಾಜ್ಞೆ ಹೊರಡಿಸಲಾಗಿತ್ತು. ಆದರೂ ಎರಡನೇ ಮತ್ತು ಮೂರನೇ ಆರೋಪಿಗಳು ಮೊದಲ ಆರೋಪಿಗೆ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದು ಕಾಮಗಾರಿ ಮುಂದುವರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
“ಕಟ್ಟಡ ನಿರ್ಮಾಣಕ್ಕೆ ಆಕ್ಷೇಪಿಸಿದಾಗ ಕೈಕಾಲು ಮುರಿಯುವುದಾಗಿ, ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಲಾಗಿದೆ ಎಂಬ ಗಂಭೀರ ಆರೋಪವೂ ದೂರಿನಲ್ಲಿ ಇದೆ. ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಕಟ್ಟಡ ನಿರ್ಮಾಣ ಮುಂದುವರಿಸಿರುವುದಾಗಿ ಆರೋಪಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಕಾಪು ಠಾಣಾಧಿಕಾರಿಗೆ ನೀಡಿದ ನಿರ್ದೇಶನದ ಮೇರೆಗೆ ಪ್ರಕರಣ ದಾಖಲಾಗಿದ್ದು, ಕಾಪು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”