ಮೊದಲ ಬಾರಿ ಬೆದರಿಕೆ ಬಂದಾಗಲೇ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮಗೊಳ್ಳಬೇಕಿತ್ತು

ಉಡುಪಿ: ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಸತತವಾಗಿ ಮೂರು ಬಾರಿ ಹುಸಿ ಬಾಂಬ್ ಬೆದರಿಕೆ ಇ-ಮೇಲ್ಗಳು ಬಂದಿರುವ ಘಟನೆ ಅತ್ಯಂತ ಗಂಭೀರ ಹಾಗೂ ಖಂಡನೀಯವಾಗಿದೆ. ನ್ಯಾಯಾಂಗದ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಇಂತಹ ದುಷ್ಕೃತ್ಯಗಳನ್ನು ತಡೆಯುವಲ್ಲಿ ಪೊಲೀಸ್ ಇಲಾಖೆಯ ವಿಫಲತೆ ಆತಂಕಕಾರಿ ಎಂದು ಹಿರಿಯ ನ್ಯಾಯವಾದಿ ಎಂ. ಶಾಂತಾರಾಮ್ ಶೆಟ್ಟಿ ತಿಳಿಸಿದ್ದಾರೆ. ಮೊದಲ ಬಾರಿ ಬೆದರಿಕೆ ಬಂದಾಗಲೇ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಂಡಿದ್ದರೆ, ಮತ್ತೆ ಮತ್ತೆ ಇಂತಹ ಬೆದರಿಕೆಗಳು ಮರುಕಳಿಸುವ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಪ್ರತಿ ಬಾರಿ ನ್ಯಾಯಾಲಯದ ಕಲಾಪ ಸ್ಥಗಿತಗೊಂಡು, ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಅನಗತ್ಯ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ನ್ಯಾಯಾಂಗದ ಅಮೂಲ್ಯ ಸಮಯ ವ್ಯರ್ಥವಾಗುತ್ತಿದ್ದು, ನ್ಯಾಯಕ್ಕಾಗಿ ಬರುವ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತಿದೆ. ರಾಜ್ಯ ಪೊಲೀಸ್ ಇಲಾಖೆ ಹಾಗೂ ತನಿಖಾ ಸಂಸ್ಥೆಗಳು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಬೆದರಿಕೆ ಇ-ಮೇಲ್ಗಳ ಮೂಲವನ್ನು ತ್ವರಿತವಾಗಿ ಪತ್ತೆಹಚ್ಚಬೇಕು. ತಪ್ಪಿತಸ್ಥರನ್ನು ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸುವ ಮೂಲಕ ಇಂತಹ ಕೃತ್ಯಗಳಿಗೆ ಶಾಶ್ವತ ತಡೆ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ. ನ್ಯಾಯಾಲಯಗಳ ಭದ್ರತೆಯನ್ನು ಇನ್ನಷ್ಟು ಬಲಪಡಿಸಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಯನ್ನು ಹಿರಿಯ ನ್ಯಾಯವಾದಿ ಎಂ. ಶಾಂತಾರಾಮ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”