ಉಡುಪಿ ಜಿಲ್ಲಾ ನ್ಯಾಯಾಲಯದ ಆದೇಶ

ಉಡುಪಿ: ಉಡುಪಿ ಜಿಲ್ಲಾ ಆರ್ಟಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ವರ್ಣೇಕರ್ ಹಾಗೂ ಅವರ ಸಹಾಯಕ ಮುನಾಫ್ ವಿರುದ್ಧ 2019 ರಲ್ಲಿ ದಾಖಲಾಗಿದ್ದ ಲೋಕಾಯುಕ್ತ ಪ್ರಕರಣದಲ್ಲಿ ನ್ಯಾಯಾಲಯ ಇಬ್ಬರು ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.
ಬೆಂಗಳೂರಿನಲ್ಲಿ ಏರ್ಶೋ ಸಂದರ್ಭದಲ್ಲಿ ವಿಷ್ಣೇಶ್ ಸತೀಶ್ ಕುಮಾರ್ ಎಂಬವರ Volkswagen Vento ಕಾರು ಬೆಂಕಿಗಾಹುತಿಯಾಗಿ ಸಂಪೂರ್ಣವಾಗಿ ಸುಟ್ಟುಹೋಗಿತ್ತು. ಈ ಹಿನ್ನೆಲೆಯಲ್ಲಿ ವಾಹನಕ್ಕೆ ಸಂಪೂರ್ಣ ನಷ್ಟ ಉಂಟಾಗಿದ್ದು, ನೋಂದಣಿ ಸಂದರ್ಭದಲ್ಲಿ ಸರ್ಕಾರಕ್ಕೆ ಪಾವತಿಸಿದ್ದ 65 ಸಾವಿರ ರೂಪಾಯಿ ನೋಂದಣಿ ಶುಲ್ಕವನ್ನು ವಾಪಸ್ ನೀಡುವಂತೆ ಆದೇಶವಾಗಿತ್ತು.
ಆ ಹಣವನ್ನು ವಾಪಸ್ ಪಡೆಯಲು ಆರ್ಟಿಒ ಕಚೇರಿಯನ್ನು ಸಂಪರ್ಕಿಸಿದಾಗ, ಹಾನಿಗೊಳಗಾದ ವಾಹನದ ವಿಮೆ ಹಾಗೂ ರೋಡ್ ಟ್ಯಾಕ್ಸ್ ಬಿಡುಗಡೆ ಮಾಡಲು ಹಣ ನೀಡುವಂತೆ ವಾಹನ ಮಾಲೀಕರಿಗೆ ಒತ್ತಡ ಹಾಕಲಾಗಿದೆ ಎಂದು ಆರೋಪಿಸಿ, ಮಾರ್ಚ್ 2019ರಲ್ಲಿ ಲೋಕಾಯುಕ್ತ ಕಾನೂನಿನಡಿ ದೂರು ದಾಖಲಿಸಲಾಗಿತ್ತು.
ದೂರಿನ ಆಧಾರದ ಮೇಲೆ ಎಸಿಬಿ ಪೊಲೀಸರು ಬಲೆ ಬೀಸಿ, ಆರ್ಟಿಒ ರಮೇಶ್ ವರ್ಣೇಕರ್ ಅವರು 4 ಸಾವಿರ ರೂಪಾಯಿ ಪಡೆಯುತ್ತಿದ್ದ ವೇಳೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಬಳಿಕ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ನಂತರ ಕರ್ನಾಟಕ ಹೈಕೋರ್ಟ್ ಆದೇಶದಂತೆ ಎಸಿಬಿ ರದ್ದುಗೊಂಡಿದ್ದು, ಪ್ರಕರಣದ ವಿಚಾರಣೆಯನ್ನು ಉಡುಪಿ ಲೋಕಾಯುಕ್ತ ಠಾಣೆಗೆ ಹಸ್ತಾಂತರಿಸಲಾಗಿತ್ತು. ವಿಚಾರಣೆಯ ವೇಳೆ ಹಣವನ್ನು ಆರ್ಟಿಒ ಅಧಿಕಾರಿ ಪಡೆದು ತಮ್ಮ ಸಹಾಯಕನಿಗೆ ನೀಡಿರುವುದಾಗಿ ತನಿಖೆಯಲ್ಲಿ ತಿಳಿದುಬಂದ ಹಿನ್ನೆಲೆಯಲ್ಲಿ ಸಹಾಯಕ ಮುನಾಫ್ ಅವರನ್ನೂ ಎರಡನೇ ಆರೋಪಿಯಾಗಿ ಪ್ರಕರಣದಲ್ಲಿ ಸೇರಿಸಲಾಗಿತ್ತು.
ಪ್ರಕರಣದ ಅಂತಿಮ ವರದಿಯನ್ನು ಪರಿಗಣಿಸಿದ ಉಡುಪಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯವು ಸಾಕ್ಷಿದಾರರ ವಿಚಾರಣೆ ಸೇರಿದಂತೆ ಸಂಪೂರ್ಣ ವಿಚಾರಣೆ ನಡೆಸಿತು. ಪ್ರಕರಣದ ಆರೋಪಗಳನ್ನು ಸಂಶಯಾತೀತವಾಗಿ ಸಾಬೀತುಪಡಿಸುವಲ್ಲಿ ಅಭಿಯೋಜನೆ ವಿಫಲವಾಗಿದೆ ಎಂದು ಪರಿಗಣಿಸಿದ ನ್ಯಾಯಾಲಯ, ಇಬ್ಬರೂ ಆರೋಪಿಗಳನ್ನು ಪ್ರಕರಣದಿಂದ ದೋಷಮುಕ್ತಗೊಳಿಸಿದೆ.
“ಆರೋಪಿಗಳ ಪರವಾಗಿ ಉಡುಪಿಯ ನ್ಯಾಯವಾದಿಗಳಾದ ಚೇರ್ಕಾಡಿ ಅಖಿಲ್ ಬಿ. ಹೆಗ್ಡೆ ಹಾಗೂ ಸಂಜೀವ್ ಎ. ವಾದಿಸಿದ್ದರು.”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”