ಮಧ್ಯಸ್ಥಿಕೆ ಮೂಲಕ ಪ್ರಕರಣಗಳ ಇತ್ಯರ್ಥ: ನ್ಯಾ.ನಿತೀನ್ ರಾವ್

ಉಡುಪಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಉದ್ದೇಶದಿಂದ ಸೆ.30ರವರೆಗೆ ‘ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 3.0’ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ನಿತಿನ್.ವೈ.ರಾವ್ ತಿಳಿಸಿದ್ದಾರೆ. ನಗರದ ಜಿಲ್ಲಾ ನ್ಯಾಯಾಲಯದಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 3.0’ ಅಭಿಯಾನ ಆ.1ರಿಂದ ಆರಂಭಗೊಂಡಿದ್ದು, ಸೆಪ್ಟೆಂಬರ್ 30ರವರೆಗೆ ಈ ವಿಶೇಷ ಅಭಿಯಾನ ನಡೆಯಲಿದೆ. ಈ ಅಭಿಯಾನದಡಿ ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸಲು ಸೂಕ್ತವಾಗಿರುವ ಬಾಕಿ ಪ್ರಕರಣಗಳನ್ನು ಗುರುತಿಸಿ, ಪೂರ್ವ-ಮಧ್ಯಸ್ಥಿಕೆ ಪರಿಶೀಲನೆ ನಡೆಸಿ, ಸಂಬಂಧಪಟ್ಟ ಪಕ್ಷಗಳಿಗೆ ಮಾಹಿತಿ/ನೋಟಿಸ್ ನೀಡಿ, ಸೂಕ್ತ ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರಗಳಿಗೆ ರಾಜಿ ಸಂಧಾನಕ್ಕಾಗಿ ಕಳುಹಿಸಬಹುದು ಎಂದು ಹೇಳಿದರು. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಮಧ್ಯಸ್ಥಿಕೆ ಪ್ರಕರಣಗಳು, ವೈವಾಹಿಕ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳು, ಅಪಘಾತ ಪರಿಹಾರ ಪ್ರಕರಣಗಳು, ವಿಭಜನೆ ಪ್ರಕರಣಗಳು, ತೆರವು ಪ್ರಕರಣಗಳು, ವಾಣಿಜ್ಯ ವ್ಯಾಜ್ಯಗಳು, ಸೇವಾ ಪ್ರಕರಣಗಳು ಸೇರಿದಂತೆ ಸಂಬಂಧಪಟ್ಟ ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರಗಳಿಗೆ ವರ್ಗಾಯಿಸಿಕೊಳ್ಳಬಹುದು ಎಂದರು. ಪ್ರಕರಣಗಳಲ್ಲಿ ತರಬೇತಿ ಹೊಂದಿದ ನುರಿತ ಮಧ್ಯಸ್ಥಿಕೆದಾರರು ಪಕ್ಷಗಾರರ ನಡುವೆ ಮಧ್ಯಸ್ಥಿಕೆ ನಡೆಸುತ್ತಾರೆ. ಮಧ್ಯಸ್ಥಿಕೆಯ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಅರಿವು ಮೂಡಿಸಲಾಗುತ್ತಿದೆ. ಈ ವಿಶೇಷ ಅಭಿಯಾನದಡಿ ಪರಿಗಣಿಸಲಾಗುವ ವಿವಿಧ ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಶೀಘ್ರವಾಗಿ, ಸೌಹಾರ್ದಯುತವಾಗಿ ಮತ್ತು ಪರಸ್ಪರ ಒಪ್ಪಿಗೆಯಿಂದ ಪರಿಹರಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. “ಮಧ್ಯಸ್ಥಿಕೆ ಎನ್ನುವುದು ವಿವಾದಕ್ಕೆ ಕೇವಲ ಪರಿಹಾರವಲ್ಲ; ಅದು ಸಂಬಂಧಗಳನ್ನು ಉಳಿಸಿಕೊಂಡು, ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡಿ, ಪರಸ್ಪರ ಒಪ್ಪಿಗೆಯ ಮೂಲಕ ಶೀಘ್ರ ನ್ಯಾಯ ಒದಗಿಸುವ ಪರಿಣಾಮಕಾರಿ ಮಾರ್ಗವಾಗಿದೆ. ‘ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 3.0’ ಪ್ರಕ್ರಿಯೆ ಮೂಲಕ ರಾಜಿ ಪ್ರಕರಣಗಳನ್ನು ತ್ವರಿತ ಮತ್ತು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ದೊರೆತಿರುವ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಹೇಳಿದರು. ಅಭಿಯಾನದ ಕುರಿತು ವಕೀಲರ ಸಂಘ ಸೇರಿದಂತೆ ಸಂಬಂಧಪಟ್ಟ ಹಿತಾಸಕ್ತಿದಾರರೊಂದಿಗೆ ಸಭೆಗಳನ್ನು ನಡೆಸಿ, ಮಧ್ಯಸ್ಥಿಕೆಯ ಮಹತ್ವ ಹಾಗೂ ಅದರಿಂದ ದೊರೆಯುವ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಕಳೆದ ‘ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ’ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ‘ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 2.0’ ಅಭಿಯಾನದಲ್ಲಿ 73ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥಗೊಂಡಿವೆ. ಸಾರ್ವಜನಿಕರು ಹಾಗೂ ಸಂಬಂಧಪಟ್ಟ ಪಕ್ಷಗಾರರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನಡೆಯುತ್ತಿರುವ ಈ ವಿಶೇಷ ಮಧ್ಯಸ್ಥಿಕೆ ಅಭಿಯಾನದ ಅನುಕೂಲ ಪಡೆದುಕೊಳ್ಳುವಂತೆ ಕರೆ ನೀಡಿದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”