ಶಿರ್ವ ಠಾಣಾ ವ್ಯಾಪ್ತಿಯ ನಡಿಗುತ್ತು ಬಳಿ ನಡೆದ ಘಟನೆ

ಕಾಪು: ಇಲ್ಲಿನ ಶಿರ್ವ ಠಾಣಾ ವ್ಯಾಪ್ತಿಯ ಕಳತ್ತೂರು ಗ್ರಾಮದ ನಡಿಗುತ್ತು ಎಂಬಲ್ಲಿ ಮೇಯಲು ಬಿಟ್ಟಿದ್ದ ದನಗಳನ್ನು ಟೆಂಪೋದಲ್ಲಿ ಹಿಂಸಾತ್ಮಕವಾಗಿ ಕಟ್ಟಿಹಾಕಿ ಕಳ್ಳತನಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ, ಒಂದೇ ಕುಟುಂಬದ ನಾಲ್ವರು ಆರೋಪಿಗಳ ಪೈಕಿ ಮೂವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿ ನ್ಯಾಯಾಲಯ ಆದೇಶಿಸಿದೆ. ಉಡುಪಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸಿಜೆಎಂ ಅವರ ನ್ಯಾಯಾಲಯದ ಮುಂದೆ ಆರೋಪಿಗಳ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಎಂ. ಪುರುಷೋತ್ತಮ್ ಅವರು, ಮೂವರು ಆರೋಪಿಗಳಾದ ಮೊಹಮ್ಮದ್ ಶರೀಫ್ (31), ಶಂಶುದ್ದೀನ್ (57) ಹಾಗೂ ಮಹಮ್ಮದ್ ಆಸೀರ್ (24) ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿ ಆದೇಶಿಸಿದ್ದಾರೆ. ಪ್ರಕರಣದ ಮೊದಲ ಆರೋಪಿ ಕಳತ್ತೂರು ಗ್ರಾಮದ ಉಮ್ಮರಬ್ಬ (64) ಅವರನ್ನು ಸೆ. 19ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಬಳಿಕ ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುರಸ್ಕರಿಸಿ, ಷರತ್ತುಬದ್ಧ ಜಾಮೀನು ನೀಡಲಾಗಿತ್ತು.
ಸೆ. 19ರಂದು ಸಂಜೆ 4 ಗಂಟೆ ಸುಮಾರಿಗೆ ಕಾಪು ತಾಲೂಕು ಕಳತ್ತೂರು ಗ್ರಾಮದ ನಡಿಗುತ್ತು ಎಂಬಲ್ಲಿ ವಸಂತಿ ಸುನೀತಾ ಕ್ವಾಡ್ರಸ್ ಎಂಬುವರು ಮೇಯಲು ಬಿಟ್ಟಿದ್ದ ಐದು ದನಗಳ ಪೈಕಿ ಎರಡು ವರ್ಷ ಪ್ರಾಯದ ಕಪ್ಪು ಬಣ್ಣದ ಒಂದು ದನ ಕಾಣೆಯಾಗಿತ್ತು. ಹುಡುಕಾಟ ನಡೆಸಿದಾಗ ಸಮೀಪದಲ್ಲಿ ನಿಂತಿದ್ದ KA-19-B-5641 ನೋಂದಣಿ ಸಂಖ್ಯೆಯ ಟೆಂಪೋದಲ್ಲಿ ಕಾಣೆಯಾಗಿದ್ದ ದನ ಪತ್ತೆಯಾಗಿದ್ದು, ಅದರೊಂದಿಗೆ ಮತ್ತೊಂದು ದನವೂ ಇರುವುದು ಕಂಡುಬಂದಿತ್ತು.
ಎರಡೂ ದನಗಳನ್ನು ಟೆಂಪೋದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಲಾಗಿತ್ತು. ಈ ವೇಳೆ ಟೆಂಪೋ ಬಳಿಯಲ್ಲಿ ದೂರುದಾರರಿಗೆ ಪರಿಚಯವಿದ್ದ ಉಮ್ಮರಬ್ಬ ಸೇರಿದಂತೆ ನಾಲ್ವರು ಇದ್ದರು. ದೂರುದಾರರನ್ನು ಕಂಡ ಕೂಡಲೇ ಆರೋಪಿಗಳು ಟೆಂಪೋವನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ವಸಂತಿ ಸುನೀತಾ ಕ್ವಾಡ್ರಸ್ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿತ್ತು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”