ಸುದೀಪ್ ರೈ ಸಾವಿಗೆ ನ್ಯಾಯ ದೊರಕಿಸಲು ಕಾನೂನು ಹೋರಾಟ
ಉಡುಪಿ: "ಓ ನಿರ್ಮೋಹಿ, ಮೋಹ್ ನ ಜಾನೆ, ಜಿನ್ಕಾ ಮೋಹ್ ಕರೇ." ಓ ಮನವೇ! ನೀನು ಯಾರ ಮೇಲೆ ಮಮತೆ ಇಟ್ಟಿದ್ದೀಯೋ, ಅವರು ಆ ಮಮತೆಯ ಮೌಲ್ಯವನ್ನೇ ಅರಿಯದವರಾಗಿರಬಹುದು." 1964 ರಲ್ಲಿ ತೆರೆಕಂಡ ಹಿಂದಿ ಚಲನಚಿತ್ರ " ಚಿತ್ರಲೇಖಾ". ಈ ಚಿತ್ರದಲ್ಲಿ ಮೊಹಮ್ಮದ್ ರಫೀ ಅವರು ಹಾಡಿರುವ ಹಾಡಿನ ಸಾಲುಗಳು ಇಂದಿಗೂ ಅಮರ. ಈ ಹಾಡಿನ ಒಂದೊಂದು ವಾಕ್ಯವು ಆತ್ಮಹತ್ಯೆ ಮಾಡಿಕೊಂಡ ಸುದೀಪ್ ರೈ ಬದುಕಿಗೆ ಅತೀ ಹತ್ತಿರವಾಗಿರುವುದು ಸುಳ್ಳಲ್ಲ. ಹೌದು, ಮನ್ ರೇ ತೂ ಕಾಹೇ ನ ಧೀರ್ ಧರೇ..? ( ಓ ಮನವೇ, ಏಕೆ ಧೈರ್ಯ ಕಳೆದುಕೊಳ್ಳುತ್ತೀಯ..? ಸ್ವಲ್ಪ ತಾಳ್ಮೆ ವಹಿಸಿ ಎಂದು ಸಂಕಷ್ಟದಲ್ಲಿದ್ದ ಯುವತಿಗೆ ಧೈರ್ಯ ತುಂಬಿ ಬಾಳು ನೀಡಿದ ಸುದೀಪ್ ರೈ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪೋಷಕರು ಈ ದುಃಖವನ್ನು ಎಂದಿಗೂ ಅರಗಿಸಿಕೊಳ್ಳುವುದಿಲ್ಲ. ಅವರ ಮಗ, ಖುಷಿ, ನಗು, ನಿದ್ರೆಯನ್ನು ಕಿತ್ತುಕೊಂಡವಳಿಗೆ ಶಿಕ್ಷೆ ಕೊಡಿಸಿಯೇ ಸಿದ್ದ ಎಂದು ಪಣತೊಟ್ಟಿದ್ದಾರೆ. ಆತ್ಮಹತ್ಯೆ ಪ್ರಕರಣದಲ್ಲಿ ಪತ್ನಿ ಸೌಮ್ಯ ಶೆಟ್ಟಿಯ ಬಂಧನವಾಗಿದ್ದು, ಪೋಲಿಸ್ ತನಿಖೆಯಲ್ಲಿ ಆಕೆಯೇ ಆತ್ಮಹತ್ಯೆಗೆ ಪ್ರಚೋದಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಪ್ರಕರಣವು ಈಗ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇದೆ. ...ಮಟ್ಟಾರ್ ಎಂಟ್ರಿ...... ಸುದೀಪ್ ರೈ ಪರವಾಗಿ ವಾದ ಮಂಡಿಸಲು ಉಡುಪಿಯ ಹಿರಿಯ ನ್ಯಾಯವಾದಿ ಮಟ್ಟಾರ್ ರತ್ನಾಕರ್ ಹೆಗ್ಡೆಯವರು, ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವಕಾಲತ್ತು ಸಲ್ಲಿಸಿದ್ದಾರೆ. ನ್ಯಾಯಾಲಯವು ಗುರುವಾರ (ಜು. 16 ) ಕ್ಕೆ ಪ್ರಕರಣದ ವಿಚಾರಣೆ ನಡೆಸಲಿದೆ. ...ಸುಪ್ರೀಂ ತೀರ್ಪು ಉಲ್ಲೇಖ... ಸರ್ವೋಚ್ಚ ನ್ಯಾಯಾಲಯದ 2022 ರಲ್ಲಿ ಜಗಜೀತ್ ಸಿಂಗ್ ಮತ್ತು ಇತರರು v. ಆಶಿಶ್ ಮಿಶ್ರಾ ಮತ್ತು ಇತರರು ಪ್ರಕರಣದಲ್ಲಿ ನೀಡಿದ ತೀರ್ಪಿನಂತೆ " ನೊಂದವರ ಪರವಾಗಿ ಸರಕಾರಿ ಅಭಿಯೋಜಕರಲ್ಲದೇ ಸ್ವತಃ ನೊಂದ ವ್ಯಕ್ತಿ ಅಥವಾ ಅವರ ಪರವಾಗಿ ಖಾಸಗಿ ನ್ಯಾಯವಾದಿಗಳು ತನಿಖೆಯ ಆರಂಭದಿಂದ ನ್ಯಾಯಾಲಯದ ಅಂತಿಮ ಹಂತದವರೆಗೂ ನ್ಯಾಯಾಲಯಕ್ಕೆ ತನ್ನ ವಾದವನ್ನು ಸಲ್ಲಿಸಲು ಅವಕಾಶವಿದೆ ಎಂದು ಹೇಳಿದೆ. ಈ ಪ್ರಕರಣದ ತೀರ್ಪಿನ ಆಧಾರದಲ್ಲಿ ಅವಕಾಶ ನೀಡಬೇಕೆಂದು ಹಿರಿಯ ನ್ಯಾಯವಾದಿ ಮಟ್ಟಾರ್ ರತ್ನಾಕರ್ ಹೆಗ್ಡೆಯವರು ವಾದ ಮಂಡಿಸಿದ್ದಾರೆ. ....ಗುರುವಾರ ಅರ್ಜಿ ವಿಚಾರಣೆ.... ಆರೋಪಿಯ ಜಾಮೀನು ಅರ್ಜಿಯ ವಿಚಾರಣೆಯೂ ಗುರುವಾರ ನಿಗದಿಯಾಗಿದ್ದು, ಸಂತ್ರಸ್ತರ ಪರವಾಗಿ ಪ್ರಾಸಿಕ್ಯೂಷನ್ ವಾದ ಮಂಡಿಸಲಿದೆ. ಆರೋಪಿಯ ಪರವಾದ ವಕೀಲರು ತಮ್ಮ ವಾದ ಸಲ್ಲಿಸಲಿದ್ದಾರೆ. ನ್ಯಾಯಾಲಯ ಸಮ್ಮತಿಸಿದರೇ ಹಿರಿಯ ನ್ಯಾಯವಾದಿ ಮಟ್ಟಾರ್ ರತ್ನಾಕರ್ ಹೆಗ್ಡೆಯವರು ಸಂತ್ರಸ್ತರ ಪರವಾಗಿ ವಾದ ಮಂಡಿಸಲಿದ್ದು, ಪ್ರಕರಣಕ್ಕೆ ಟ್ವಿಸ್ಟ್ ಸಿಗಲಿದೆ. ಬಾಕ್ಸ್ ಮೂಲತಃ ಪುತ್ತೂರು ನೆಲ್ಯಾಡಿಯ ಸುದೀಪ್ ರೈ ಮತ್ತು ಕಾರ್ಕಳ ಕಜೆ ನಿವಾಸಿ, ಪುತ್ತೂರು ಸಬ್ ರಿಜಿಸ್ಟ್ರಾರ್ ಕಚೇರಿ ಉದ್ಯೋಗಿ ಸೌಮ್ಯ ಶೆಟ್ಟಿ ಫೆ.17ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಬಳಿಕ ಸುದೀಪ್ ಮತ್ತು ಸೌಮ್ಯ ಕಾರ್ಕಳ ಜೋಡುರಸ್ತೆಯ ಬಂಗ್ಲೆಗುಡ್ಡೆ ಕಜೆ ಎಂಬಲ್ಲಿ ವಾಸವಾಗಿದ್ದರು. ಮಾ.17ರಂದು ಸುದೀಪ್ ಕಾರಿನಲ್ಲಿ ತನ್ನ ತಾಯಿಯೊಂದಿಗೆ ಪೂಜಾ ಕಾರ್ಯಕ್ರಮದ ನಿಮಿತ್ತ ಕಡಬ ತಾಲೂಕಿನ ನೆಲ್ಯಾಡಿ ಪೇಟೆಯ ಸಮೀಪ ಹೋಗುತ್ತಿದ್ದಾಗ ಸೌಮ್ಯ, ಸ್ಕೂಟಿಯಲ್ಲಿ ಬಂದು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಳು ಎಂದು ದೂರಲಾಗಿತ್ತು. ನಂತರ ಸುದೀಪ್ ಕಾರ್ಕಳಕ್ಕೆ ಹೋಗಿದ್ದು, ಮಾ.22ರಂದು ಸುದೀಪ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಾ.24ರಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸುದೀಪ್ಗೆ ಸೌಮ್ಯ ಮಾನಸಿಕ ಚಿತ್ರಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿರುವುದಾಗಿ ಮೃತರ ತಂದೆ ದಾಮೋದರ್ ರೈ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಎ.1ರಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಕಾರ್ಕಳ ನಗರ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್. ಅವರಿಗೆ ವಹಿಸಿದ್ದರು. ಅದರಂತೆ ತನಿಖೆ ನಡೆಸಿದ ಪೊಲೀಸರು, ಪ್ರಕರಣದಲ್ಲಿ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ ಪ್ರಾಥಮಿಕ ತನಿಖೆ ನಡೆಸಿ, ಸಾಕ್ಷ್ಯ ಪುರಾವೆಗಳಿಂದ ಆರೋಪಿ ಸೌಮ್ಯ ಶೆಟ್ಟಿಯನ್ನು ಎ.11ರಂದು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆಕೆ ನ್ಯಾಯಾಂಗ ಬಂಧನದಲ್ಲಿದ್ದಾಳೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”