ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಆಟಿಡೊಂಜಿ ದಿನ

ಉಡುಪಿ: ಹಿಂದಿನ ಕಾಲವೊಂದಿತ್ತು... ‘ವಕೀಲ’ ಎಂದಾಕ್ಷಣ ಕಣ್ಣಮುಂದೆ ಮೂಡುತ್ತಿದ್ದ ಚಿತ್ರವೇ ವಿಭಿನ್ನ. ಬಿಳಿ ಧೋತಿ, ಸಾಂಪ್ರದಾಯಿಕ ಕೋಟು, ತಲೆಯ ಮೇಲೆ ಪೇಟ—ಇದು ಕೇವಲ ವಕೀಲರ ಉಡುಪಾಗಿರಲಿಲ್ಲ; ಅವರ ವೃತ್ತಿಯ ಘನತೆ, ಶಿಸ್ತು, ಸಂಸ್ಕಾರ ಮತ್ತು ವ್ಯಕ್ತಿತ್ವದ ಪ್ರತೀಕವಾಗಿತ್ತು. ಹಿರಿಯ ವಕೀಲರು ಅನುಸರಿಸುತ್ತಿದ್ದ ಆ ಪರಂಪರೆ ಇಂದಿನ ಪೀಳಿಗೆಗೆ ನೆನಪಿನ ಪುಟವಾಗಿದ್ದರೂ, ಅದರ ಮೇಲಿನ ಗೌರವ ಮಾತ್ರ ಕಡಿಮೆಯಾಗಿಲ್ಲ. ಇದೇ ಪರಂಪರೆಯನ್ನು ನೆನಪಿಸುವಂತೆ ಉಡುಪಿ ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ‘ಆಟಿದ ಲೇಸು’ ಕಾರ್ಯಕ್ರಮದಲ್ಲಿ ವಕೀಲರು ವಿಶೇಷವಾಗಿ ಗಮನ ಸೆಳೆದರು. ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಆಹಾರ ಪದ್ಧತಿಯನ್ನು ಪರಿಚಯಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದ ಅಂಗವಾಗಿ ವಕೀಲರು ತಮ್ಮ ಹಿರಿಯರ ಕಾಲದ ಸಾಂಪ್ರದಾಯಿಕ ವೇಷಭೂಷಣವನ್ನು ಅನುಕರಿಸಿ ನ್ಯಾಯಾಲಯದ ಕಾರ್ಯಕಲಾಪಕ್ಕೆ ಹಾಜರಾದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಕಿರಣ್.ಎಸ್ ಗಂಗಣ್ಣನವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇತರ ನ್ಯಾಯಾಧೀಶರು ಭಾಗವಹಿಸಿದ್ದರು. ಪುರುಷರು ಬಿಳಿ ಧೋತಿ, ಕೋಟು ಹಾಗೂ ತಲೆಯ ಮೇಲೆ ಪೇಟ ಧರಿಸಿಕೊಂಡು ನ್ಯಾಯಾಲಯಕ್ಕೆ ಬಂದ ವಕೀಲರು, ಎಂದಿನ ಕಪ್ಪು ಕೋಟಿನ ನಡುವೆಯೇ ವಿಭಿನ್ನವಾಗಿ ಕಾಣಿಸಿಕೊಂಡರು. ಮಹಿಳೆಯರು ಸೀರೇ ಉಟ್ಟುಕೊಂಡು ಕಲಾಪಕ್ಕೆ ಹಾಜರಾದರು. ಹಿರಿಯ ವಕೀಲರ ವೃತ್ತಿಪರ ಪರಂಪರೆಯನ್ನು ಗೌರವಿಸುವುದರ ಜತೆಗೆ, ತುಳುನಾಡಿನ ನೆಲದ ಸಂಸ್ಕೃತಿಯನ್ನು ತಮ್ಮ ವೃತ್ತಿಜೀವನದೊಂದಿಗೆ ಬೆಸೆದುಕೊಂಡ ಅಪರೂಪದ ದೃಶ್ಯ ಇದಾಗಿತ್ತು.

‘ಆಟಿದ ಲೇಸು’ ಕೇವಲ ವೇಷಭೂಷಣಕ್ಕೆ ಸೀಮಿತವಾಗಿರಲಿಲ್ಲ. ತುಳುನಾಡಿನ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನೂ ಕಾರ್ಯಕ್ರಮದಲ್ಲಿ ಪರಿಚಯಿಸಲಾಯಿತು. ಕಾರ್ಯಕ್ರಮದಲ್ಲಿ ಹೆಸರುಉಸ್ಲಿ, ಅವಲಕ್ಕಿ, ಒಳ್ಳೆ ಮೆಣಸು ಕಷಾಯ ಸೇರಿದಂತೆ ಬೆಳಗಿನ ಉಪಾಹಾರದ ವ್ಯವಸ್ಥೆಯಿದ್ದು, 11 ಗಂಟೆಗೆ ಸಾಂಪ್ರದಾಯಿಕ ‘ಆಮ್ ಪನ್ನ’ (ಮಾವಿನ ಪಾನಕ) ನೀಡಲಾಯಿತು. ಮಧ್ಯಾಹ್ನದ ಊಟದಲ್ಲಿ ತುಳುನಾಡಿನ ವಿವಿಧ ಸಾಂಪ್ರದಾಯಿಕ ಖಾದ್ಯಗಳು ಸವಿಯಲು ಸಿದ್ಧವಾಗಿದ್ದವು. ಲಿಂಬೆ ಅಂಬಡೆ ಉಪ್ಪಿನಕಾಯಿ, ಹುರಳಿಚಟ್ನಿ, ಉಪ್ಪಿಗೆ ಹಾಕಿದ ಪೆಜ್ಜಕಾಯಿ ಮತ್ತು ಮಾವಿನಕಾಯಿ ಚಟ್ನಿ, ತಿಮರೆ ಚಟ್ನಿ, ಗುಂಡ, ಮಶ್ರೂಮ್ ಕುಂದಾಪುರ, ಸೇಮಿಗೆ, ಕಾಯಿಹಾಲು, ಹಲಸಿನ ಎಲೆ ಗಟ್ಟಿ, ಮುಳ್ಕ, ಪುಂಡಿ, ಕಣಿಲೆ ಹೆಸರು ಗಸಿ, ಸೌತೆಕಾಯಿ ಅವಡೆಗಸಿ, ಕುಚ್ಚಿಗೆ, ಬೆಳ್ತಿಗೆ ಅನ್ನ, ಹುರುಳಿ ಸಾರು, ದಾಲ್, ಹಲಸಿನ ಹಪ್ಪಳ, ಸಂಡಿಗೆ, ಪತ್ರೋಡೆ, ಕಾಡು ಕಂಚಲ ಫ್ರೈ, ಜೀಗುಜ್ಜೆ ಫ್ರೈ, ರಾಗಿ ಮಣ್ಣಿ, ಉಪ್ಪಡ್ ಪಚ್ಚೀರ್, ಕಾಶಿ ಹಲ್ವಾ, ಹಲಸಿನ ಹಣ್ಣಿನ ಪಾಯಸ, ಮೊಸರು, ಮಜ್ಜಿಗೆ ಹಾಗೂ ತೊಜಂಕ್ ಅಂಬಡೆ ಸೇರಿದಂತೆ ಒಟ್ಟು 32 ಬಗೆಯ ಖಾದ್ಯಗಳನ್ನು ಒಳಗೊಂಡ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಬಾಳೆ ಎಲೆಯ ಮೇಲೆ ಬಡಿಸಿದ ಈ ಸಾಂಪ್ರದಾಯಿಕ ಊಟವು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ಆಹಾರದ ಮೂಲಕವೂ ತುಳುನಾಡಿನ ಹಳೆಯ ಜೀವನಶೈಲಿ ಮತ್ತು ಅಡುಗೆ ಪರಂಪರೆಯನ್ನು ಪರಿಚಯಿಸುವ ಪ್ರಯತ್ನ ನಡೆಯಿತು.
ನ್ಯಾಯಾಲಯದ ಗಂಭೀರ ವಾತಾವರಣದಲ್ಲಿ ಪ್ರತಿದಿನ ಕಾನೂನು, ವಾದ-ವಿವಾದ ಮತ್ತು ತೀರ್ಪುಗಳ ನಡುವೆ ಕಾಣಿಸಿಕೊಳ್ಳುವ ವಕೀಲರು, ಅಂದು ತಮ್ಮ ಸಾಂಪ್ರದಾಯಿಕ ಅವತಾರದಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಹಿರಿಯರನ್ನು ಅನುಕರಿಸುವ ಮೂಲಕ ಅವರ ಕಾಲದ ವೃತ್ತಿಪರ ಸಂಸ್ಕೃತಿಯನ್ನು ನೆನಪಿಸಿಕೊಳ್ಳುವುದರ ಜತೆಗೆ, ‘ಆಟಿದ ಲೇಸು’ ಮೂಲಕ ತುಳುನಾಡಿನ ಸಂಸ್ಕೃತಿಯ ಸೊಗಡನ್ನೂ ಹೊಸ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ನಡೆಯಿತು. ಹೀಗಾಗಿ, ಉಡುಪು ಬದಲಾದ ಒಂದು ದಿನವಾಗಿರಲಿಲ್ಲ ಇದು; ಹಿರಿಯರ ಪರಂಪರೆ, ವಕೀಲ ವೃತ್ತಿಯ ಘನತೆ ಮತ್ತು ತುಳುನಾಡಿನ ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ನೆನಪಿಸಿದ ವಿಶೇಷ ದಿನವಾಗಿತ್ತು.
“"ಯುವಕರು ಆಧುನಿಕತೆಯೊಂದಿಗೆ ಮುನ್ನಡೆಯುವ ಜತೆಗೆ ನಮ್ಮ ನೆಲದ ಸಂಸ್ಕೃತಿ, ಪರಂಪರೆ ಮತ್ತು ಹಿರಿಯರ ಜೀವನಶೈಲಿಯನ್ನು ಮರೆಯಬಾರದು. ‘ಆಟಿದ ಲೇಸು’ಯಂತಹ ಕಾರ್ಯಕ್ರಮಗಳು ನಮ್ಮ ಮೂಲ ಸಂಸ್ಕೃತಿಯನ್ನು ಅರಿತು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಅವಕಾಶ ನೀಡುತ್ತವೆ. ಯುವಕರು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಮ್ಮ ತುಳುನಾಡಿನ ಪರಂಪರೆಯನ್ನು ಉಳಿಸಿ ಬೆಳೆಸಬೇಕು.” ಮಟ್ಟಾರ್ ರತ್ನಾಕರ್ ಹೆಗ್ಡೆ, ಉಡುಪಿ”
““ಹಿಂದಿನ ಕಾಲದ ವಕೀಲರ ಉಡುಪು ವೃತ್ತಿಯ ಘನತೆ ಮತ್ತು ಶಿಸ್ತಿನ ಪ್ರತೀಕವಾಗಿತ್ತು. ಹಿರಿಯರ ಪರಂಪರೆಯನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಇಂದು ಪೇಟ–ಧೋತಿ ಧರಿಸಿದ್ದೇವೆ. ಹಿರಿಯರ ವೃತ್ತಿಪರ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಮುಖ್ಯ. ‘ಆಟಿದ ಲೇಸು’ ಮೂಲಕ ತುಳುನಾಡಿನ ಸಂಸ್ಕೃತಿಯ ಸೊಗಡನ್ನು ಉಳಿಸುವ ಪ್ರಯತ್ನವಾಗಿದೆ. ಇಂತಹ ಕಾರ್ಯಕ್ರಮಗಳು ನಮ್ಮ ಬೇರುಗಳನ್ನು ನೆನಪಿಸುತ್ತವೆ. ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕು.” ವೈ.ಟಿ ರಾಘವೇಂದ್ರ, ಹಿರಿಯ ನ್ಯಾಯವಾದಿ, ಉಡುಪಿ. ”
ಕಾರ್ಯಕ್ರಮದ ಉದ್ಘಾಟನೆ ಅವಧಿಯಲ್ಲಿ ಆಟಿ ಕಳಂಜ ಪ್ರದರ್ಶಿಸಲಾಯಿತು. ಜೊತೆಗೆ ಹಿಂದಿನ ಕಾಲದ ನೇಗಿಲು, ಚೆನ್ನಮಣೆ ಸೇರಿದಂತೆ ಅನೇಕ ಅಮೂಲ್ಯ ವಸ್ತುಗಳ ಪ್ರದರ್ಶನ ನಡೆಯಿತು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”