ಟೆಂಡರ್ ಬಗ್ಗೆ ಮಾಹಿತಿ ಪಡೆಯಲು ಬುಲಾವ್

ಉಡುಪಿ: ಮಾಜಿ ರೌಡಿಶೀಟರ್ ಡೇವಿಡ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಆಳಕ್ಕೆ ಇಳಿದಿರುವ ಖಾಕಿ ಪಡೆಗೆ ದಿನಕ್ಕೊಂದು ಹೊಸ ಮಾಹಿತಿ ಲಭಿಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಅದಾನಿ ಸಂಸ್ಥೆಯ ಇಬ್ಬರು ಮುಖ್ಯಸ್ಥರಿಗೆ ಖಾಕಿ ಬುಲಾವ್ ನೀಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನಿಖೆಯ ವೇಳೆ ಯುಪಿಸಿಎಲ್ನ ಟೆಂಡರ್ ವಿಚಾರಕ್ಕೆ ಸಂಬಂಧಿಸಿ ಡೇವಿಡ್ ಹಾಗೂ ಇತರ ಸ್ಥಳೀಯ ಗುತ್ತಿಗೆದಾರರ ನಡುವೆ ಅಸಮಾಧಾನವಿದ್ದ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಡೇವಿಡ್ಗೆ ಟೆಂಡರ್ಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು ಹಾಗೂ ಈ ವಿಚಾರದಲ್ಲಿ ಕಮಿಷನ್ ವ್ಯವಹಾರದ ಆರೋಪಗಳೂ ಕೇಳಿಬಂದಿವೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಮೇಲ್ನೋಟಕ್ಕೆ ತನಿಖೆಯಲ್ಲಿ ಪತ್ತೆಯಾಗಿರುವ ಅಂಶಗಳನ್ನು ದೃಢಪಡಿಸಿಕೊಳ್ಳಲು ಹಾಗೂ ಡೇವಿಡ್ಗೆ ಎಷ್ಟು ಮೊತ್ತದ ಗುತ್ತಿಗೆ ಕಾಮಗಾರಿಗಳನ್ನು ನೀಡಲಾಗಿತ್ತು ಎಂಬ ಮಾಹಿತಿ ಪಡೆಯುವ ಉದ್ದೇಶದಿಂದ ಅದಾನಿ ಸಂಸ್ಥೆಯ ಇಬ್ಬರು ಮುಖ್ಯಸ್ಥರ ವಿಚಾರಣೆ ಬಹಳ ಮುಖ್ಯವಾಗಿದೆ ಎನ್ನಲಾಗಿದೆ.
ಸುಮಾರು ₹50 ಲಕ್ಷ ಮೌಲ್ಯದ ಪೈಪ್ಲೈನ್ ಕಾಮಗಾರಿಯ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿ ಡೇವಿಡ್ ಹಾಗೂ ಕಿಶೋರ್ ಪೂಜಾರಿ ನಡುವೆ ವಾಕ್ಸಮರ ನಡೆದಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಅದಾನಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚೆಯೂ ನಡೆದಿದ್ದು, ಇತರ ಗುತ್ತಿಗೆದಾರರಿಗೆ ಹೋಲಿಸಿದರೆ ಡೇವಿಡ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂಬ ಬಗ್ಗೆ ತಕರಾರು ವ್ಯಕ್ತವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಈ ವಿಚಾರಕ್ಕೆ ಸಂಬಂಧಿಸಿ ಡೇವಿಡ್ ಇತರ ಗುತ್ತಿಗೆದಾರರ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದ್ದ ಎನ್ನಲಾಗುತ್ತಿದೆ. ಅದೇ ಮಾತು ಮುಂದಿನ ದಿನಗಳಲ್ಲಿ ವೈಷಮ್ಯಕ್ಕೆ ಕಾರಣವಾಯಿತೇ? ಆ ವೈಷಮ್ಯವೇ ಡೇವಿಡ್ ಹತ್ಯೆಗೆ ಮುನ್ನುಡಿಯಾಯಿತೇ..? ಈ ಎಲ್ಲಾ ಪ್ರಶ್ನೆಗಳಿಗೆ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಉತ್ತರ ಸ್ಪಷ್ಟವಾಗಲಿದೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”