ಡೇವಿಡ್ ಡಿಸೋಜಾ ಹತ್ಯೆ ಪ್ರಕರಣಕ್ಕೆ ತಿರುವು

ಬಾಂಬೆ: "ಕೋಯಿ ಸರೆಂಡರ್ ಹುವಾ ಕ್ಯಾ..?" ದಗಡಿಚಾಳದ ಸೂತಕದ ಮನೆಯಲ್ಲಿ ಗಡಸು ದನಿಯಲ್ಲಿ ಕೇಳಿದ್ದ ಅರುಣ್ ಗೌಳಿ. ಅನಿಲ್ ಬಂಬಳುಕರ್ ದಾದರ್ನಲ್ಲಿ ಸಿಹಿ ಹಂಚಿದ್ದಾನೆ ಎಂದಿದ್ದ ಸದಾಪಾವಲೆ (ಮಾಮ). ಬಾಂಬೆಯ ಭೂಗತ ಲೋಕದಲ್ಲಿ ಇದೊಂದು ಘಟನೆ ಇಷ್ಟೊಂದು ನೆತ್ತರು ಚೆಲ್ಲುತ್ತದೆ ಎಂದು ಯಾರು ಊಹಿಸಿರಲಿಲ್ಲ. 1990 ರ ಜನವರಿ 22 ರಂದು ಬಾಂಬೆಯ ಮಾಹಿಮ್ನಲ್ಲಿ ಶ್ರೀರಂಗ ಪವಾರ್ ಹಾರಿಸಿದ ಗುಂಡು ಪಾಪಾ ಗೌಳಿಯನ್ನು ಬಲಿ ತೆಗೆದುಕೊಂಡಿತ್ತು. ತನ್ನ ಪ್ರೀತಿಯ ತಮ್ಮನನ್ನು ಕೊಂದವರನ್ನು ಅಂಡರ್ವಲ್ಡ್ನ "Daddy" ಬಿಟ್ಟಾನೆ..? No chance ಗೌಳಿ ಫೆಬ್ರವರಿ 10 ರಂದು ಸಿಹಿ ಹಂಚಿದ ಅನಿಲ್ ಬಂಬುಳಕರ್ ಹಾಗು 11 ರಂದು ತಮ್ಮನ ಫೋನ್ ಟ್ಯಾಪ್ ಮಾಡಿದ್ದ ರಾಮಚಂದ್ರ ಪಾಟನಕರ್ ಅವರನ್ನು ಕೊಲ್ಲಿಸಿದ್ದ. ಆದರೆ ಆತನ ಪ್ರತಿಕಾರದ ಜ್ವಾಲೆ ಆರಿರಲಿಲ್ಲ.
ದಾವೂದ್ ಹವಾಲಾ ವ್ಯವಹಾರದಲ್ಲಿ ಪಾಲು ಹೊಂದಿದ್ದ ಮಹೇಶ್ ಚೋರಡಿಯಾನನ್ನು 1989 ರ ಡಿಸೆಂಬರ್ 28 ರಂದು ಗೌಳಿಯ ಇಶಾರೆಯ ಮೇರೆಗೆ ಸಲೀಮ್ ಹಾಗು ಶಿರಸಟ್ ದಗಡಿಚಾಳ್ಯಕ್ಕೆ ಹೊತ್ತುತಂದಿದ್ದರು. ಆಗ ಗೌಳಿಯ ಫೋನು ರಿಂಗಣಿಸಿತ್ತು. ಆತ ಮಾಡಿದ ಒಂದೇ ಒಂದು ತಪ್ಪೆಂದರೇ " ಪಾಪು ತೂ ಭಾತ್ ಕರ್" ಎಂದು ಕಿಶೋರ್ ಗೌಳಿಗೆ ಅರುಣ್ ಗೌಳಿಗೆ ಹೇಳಿದ್ದ. ಅಷ್ಟೇ ದಾವೂದ್ನ ವಕ್ರದೃಷ್ಠಿ ಪಾಪ ಗೌಳಿಯ ಮೇಲೆ ಬಿದ್ದಿತ್ತು. ಕಿಶೋರ್ ಗೌಳಿಯನ್ನು ಪಾಪು ಗೌಳಿ ಎಂದು ಕರೆಯುತ್ತಿದ್ದರು. ದಾವೂದ್ ಒಂದೇ ಒಂದು ಸಲ ನಿನ್ನ ಅಣ್ಣ ಜೊತೆ ಮಾತನಾಡಿಸು ಎಂದು ಪರಿ ಪರಿಯಾಗಿ ಕೇಳಿಕೊಂಡರು, ಪಾಪು ಗೌಳಿ ಅಣ್ಣನಿಗೆ ಕರೆಯನ್ನು ಕೊಡಲೇ ಇಲ್ಲಾ.
ಈ ದ್ವೇಷವೇ ಆತನು ಹೆಣವಾಗುವಂತೆ ಮಾಡಿತ್ತು. ಆದರೆ ತಮ್ಮನ ಕೊಲೆಯ ನಂತರ ಅರುಣ್ ಗೌಳಿ ವ್ಯಗ್ರನಾಗಿದ್ದ. ವಕೀಲನ ಮಗ ಮನೋಜ್ ಕುಲಕರ್ಣಿಯನ್ನು ಕ್ರೈಮ್ ಬ್ರಾಂಚ್ ಅಧಿಕಾರಿಗಳೆಂದು ಹೊತ್ತು ತಂದು, ಕಣ್ಣನ್ನೇ ಕಿತ್ತು ಹಿಂಸೆ ಕೊಟ್ಟು, ಮಾಹಿತಿ ಪಡೆದು ಕೊಂದಿದ್ದರು. ದಾವೂದ್ ಗ್ಯಾಂಗಿನ ಶಾರ್ಪ್ ಶೂಟರ್ ಅನಿಲ್ ಪರಬ್, ಸುನೀಲ್ ಸಾವಂತ್, ಶ್ರೀರಂಗ, ರವೀಂದ್ರ ವಿಠ್ಠಲ ಡೋಳಾಸ್ ಇದ್ದರು ಎಂದು ಆತ ಬಾಯಿ ಬಿಟ್ಟಿದ್ದ.
ಮನೋಜ್ ಕುಲಕರ್ಣಿ ಸಾವಿನಲ್ಲಿ ಜೈಲು ಸೇರಿದ ಅರುಣ್ ಗೌಳಿ, ತನ್ನ ಜೊತೆಗೆ ಸಿಕ್ಕಿದ ಕಾರ್ಬನ್ ( ಸ್ವಯಂಚಾಲಿತ ) ಬಂದೂಕಿನಿಂದ TADA ಪ್ರಕರಣದಲ್ಲಿ ಆರೋಪಿಯಾದ. ಇದು ಆತನನ್ನು 7 ವರ್ಷ ಜೈಲಿನಲ್ಲಿ ಕೂರಿಸುತ್ತದೆ ಎಂದು ಆತನಿಗೆ ಗೊತ್ತಿರಲಿಲ್ಲ. ಆದರೆ ಅವನೊಬ್ಬನಿದ್ದ. ಸದಾ ಪಾವಲೆ, Daddy ಯ ಎಲ್ಲ ಇಶಾರೆಗಳನ್ನು ಚಾಚು ತಪ್ಪದೇ ಜಾರಿಗೊಳಿಸುತ್ತಿದ್ದ. ಹಾಗೆ ಜೈಲಿನಲ್ಲಿ ಗೌಳಿ ಮಠಾರಿಯಲ್ಲಿ ಬರೆದ ಚೀಟಿಯಲ್ಲಿ ಇಬ್ರಾಹಿಂ ಕಸ್ಕರ್ ಹೆಸರಿತ್ತು...! ದಾವೂದ್ ತಂಗಿ ಹಸೀನಾಳ ಗಂಡ ಇಬ್ರಾಹಿಂ ಕಸ್ಕರ್. ನೇರವಾಗಿ ದಾವೂದ್ ತಂಗಿಯ ಮಾಂಗಲ್ಯಕ್ಕೆ ಕೈ ಹಾಕಿದ್ದ ಗೌಳಿ. 1992 ರ ಜುಲೈ 27 ರಂದು ಜೈರಾಜ್ ಗಲ್ಲಿಯಲ್ಲಿ ಗೌಳಿ ಕಂಪೆನಿಯ ಶೂಟರ್ ಶೈಲೇಶ್ ಹಲ್ದಂಕರ್ ಹಾರಿಸಿದ ಇಬ್ರಾಹಿಂ ಕಸ್ಕರ್ ಖಬರಸ್ಥಾನ ಸೇರಿದ್ದ. ಆಗ ದುಬೈಯಲ್ಲಿದ್ದ ದಾವೂದ್, ಪಾಪಾ ಗೌಳಿಯ ಜೀವಕ್ಕೆ ಕೈ ಹಾಕಬಾರದು ಅಂದುಕೊಂಡಿದ್ದ.
ಇದು ಭೂಗತಲೋಕ. ಇಲ್ಲಿ ಶತ್ರುತ್ವ ಎರಡು ಗ್ಯಾಂಗಿನ ನಡುವೆ ಇರಬೇಕೇ ಹೊರತು ಕುಟುಂಬಸ್ಥರ ಮೇಲಲ್ಲ. ಈ ದುನಿಯಾದಲ್ಲಿ ಇರುವ ಅಲಿಖಿತ ನಿಯಮವೆಂದರೇ ಕುಟಂಬಸ್ಥರ ಮೇಲೆ ದಾಳಿ ಮಾಡಬಾರದು ಎಂದು. ಅದನ್ನು ಮುರಿದವನು ದಾವೂದ್. ಲೆಕ್ಕ ಚುಕ್ತಾ ಮಾಡಿದವನು ಅರುಣ್ ಗೌಳಿ.
ಭೂಗತ ಲೋಕದಲ್ಲಿ 2013 ರ ನಂತರ ಮರೆಯಾಗಿದ್ದ ಹೇಮಂತ್ ಪೂಜಾರಿ (HP) ಹೆಸರು, ಮುದರಂಗಡಿಯ ಡೇವಿಡ್ ಡಿಸೋಜಾ ಫೈರಿಂಗ್ ಪ್ರಕರಣದಲ್ಲಿ ಮತ್ತೇ ಮುನ್ನಲೆಗೆ ಬಂದಿತ್ತು. ಇವನಿಗೊಬ್ಬ ತಮ್ಮನಿದ್ದಾನೆ. ಅವನೇ ಕಿಶೋರ್ ಪೂಜಾರಿ ( KP). ತನ್ನ ತಮ್ಮನ ಮೇಲಿನ ಪ್ರೀತಿಗೆ, ಆತನ ಉದ್ಯಮಕ್ಕೆ ಸಮಸ್ಯೆಯಾಗಿದ್ದ ಡೇವಿಡ್ನನ್ನು ಹತ್ಯೆ ಮಾಡಲು ಇಶಾರೆ ಹೊರಡಿಸಿದನೇ..? ಎಂಬ ಶಂಕೆ ತನಿಖೆಯ ಮಗ್ಗಲು ಬದಲಾಗಿದೆ.
ಪಡುಬಿದ್ರೆಯಲ್ಲಿ ನಾಗಾರ್ಜುನ ಸಂಸ್ಥೆಯಿದ್ದಾಗ ಉದ್ಯೋಗಿಯಾಗಿದ್ದ ಕಿಶೋರ್ ಪೂಜಾರಿ ನಂತರದಲ್ಲಿ ಯುಪಿಸಿಎಲ್ನಲ್ಲಿ ಗುತ್ತಿಗೆದಾರನಾಗಿದ್ದ. ಆದರೇ ಡೇವಿಡ್ ಹಾಗು ಈತನಿಗೆ ಉದ್ಯಮದಲ್ಲಿ ಪೈಪೋಟಿ ಇತ್ತು. ಡೇವಿಡ್ ಯುಪಿಸಿಎಲ್ ಒಳಗೆ ಇತರ ಗುತ್ತಿಗೆದಾರರು ಪ್ರವೇಶಿಸದಂತೆ ಸರ್ವಾಧಿಕಾರತ್ವ ನಡೆಸುತ್ತಿದ್ದ ಎನ್ನಲಾಗಿದೆ. ಹೀಗಾಗಿ ಕಿಶೋರ್ ಪೂಜಾರಿಯ ಮೇಲೆ ಖಾಕಿ ಅನುಮಾನ ಬಲವಾಗಿದೆ.
ಹರಿಯಾಣದಿಂದ ಕರೆತಂದ ಕಂಪೆನಿಯ ಮ್ಯಾನೇಜರ್ ಅವರ ಹೇಳಿಕೆಯಂತೆ ಕಂಪೆನಿಗೂ, ಡೇವಿಡ್ಗೂ ಯಾವುದೇ ದ್ವೇಷ ಇಲ್ಲ ಎಂಬುದು ಮೇಲ್ನೋಟಕ್ಕೆ ಸಾಭೀತಾಗಿದೆ. ಸ್ಥಳೀಯರ ಸಹಕಾರದಿಂದ ಕೊಲೆಯಾಗಿರುವುದು ದೃಢವಾಗಿದ್ದು, ಸ್ಥಳೀಯ ವ್ಯಕ್ತಿಗಳು ಶೂಟರ್ಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ. ಹೀಗಾಗಿ ಖಾಕಿಯ ತನಿಖೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದ್ದು ಅಧಿಕೃತ ಮುದ್ರೆ ಬೀಳಲು ಬಾಕಿ ಇದೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”