ಕುಂದಾಪುರ ಡಿವೈಎಸ್ಪಿ ಎಚ್ಡಿ ಕುಲಕರ್ಣಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ

ಕುಂದಾಪುರ: ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಹಿಂಸಾತ್ಮಕವಾಗಿ ಎಳೆದು ಕಾರಿನಲ್ಲಿ ತುಂಬಿಕೊಂಡು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಕೃತ್ಯಕ್ಕೆ ಬಳಸಿದ ಕಾರು ಸಹಿತ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ತೋಟದಮನೆಯ ಮುಹಮ್ಮದ್ ಸಿನಾನ್ (20) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸೆ. 29ರಂದು ಮಧ್ಯಾಹ್ನ 1.30ರ ಸುಮಾರಿಗೆ ಬಿಳಿ ಬಣ್ಣದ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಬಂದ ಅಪರಿಚಿತರು ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಬಲವಂತವಾಗಿ ಎಳೆದು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದರು. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಸ್ಥಳೀಯರು ನೀಡಿದ ದೂರಿನ ಆಧಾರದ ಮೇಲೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯ ಪತ್ತೆ ಕಾರ್ಯವು ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಅವರ ಉಸ್ತುವಾರಿಯಲ್ಲಿ ನಡೆದಿದೆ. ಕೊಲ್ಲೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಸಿಬ್ಬಂದಿಗಳಾದ ನಾಗೇಂದ್ರ, ರುದ್ರೇಶ, ನವೀನ್ ಕುಮಾರ್, ವಿಲಾಸ್ ರಾಠೋಡ್, ನಾಗರಾಜ ಮೊದಲಾದವರನ್ನೊಳಗೊಂಡ ತಂಡ ಪ್ರಮುಖ ಆರೋಪಿಯನ್ನು ಪತ್ತೆಹಚ್ಚಿ, ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದೆ.
“ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳು ಭಾಗಿಯಾಗಿದ್ದು, ಅವರನ್ನು ಶೀಘ್ರವಾಗಿ ಪತ್ತೆಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿ ಮುಹಮ್ಮದ್ ಸಿನಾನ್ ಕುಂದಾಪುರ ಉಪವಿಭಾಗದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಒಟ್ಟು ಐದು ದನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”