ನೇಪಾಳ, ಮ್ಯಾನ್ಮಾರ್, ಮಲೇಷ್ಯಾ, ಸಿಂಗಾಪುರ... ದೇಶದಿಂದ ದೇಶಕ್ಕೆ HP ಹುಡುಕಾಟ; ಅಸಲಿ HP ಅಡಗಿರುವುದು ಎಲ್ಲಿ..?

ಬಾಂಬೆ: “No crime is perfect; what is needed is a perfect investigation.” — ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಿದ್ದ ಈ ಮಾತು ಈಗ ಮತ್ತೆ ನೆನಪಾಗುತ್ತಿದೆ. ಯಾವುದೇ ಅಪರಾಧ ಎಷ್ಟೇ ಕರಾರುವಕ್ಕಾಗಿ ನಡೆದಿದ್ದರೂ, ಸೂಕ್ತ ತನಿಖೆಯ ಮುಂದೆ ಅದರ ಒಂದಲ್ಲೊಂದು ಸುಳಿವು ಹೊರಬೀಳುತ್ತದೆ ಎಂಬ ಮಾತಿಗೆ ಪೂರಕವಾದ ಕೆಲವು ಕುತೂಹಲಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಆದರೆ, ಇವುಗಳಲ್ಲಿ ಯಾವುದಕ್ಕೂ ಇನ್ನೂ ಅಧಿಕೃತ ದೃಢೀಕರಣ ದೊರೆತಿಲ್ಲ. ಶಾಂತವಾಗಿದ್ದ ಉಡುಪಿ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಕಾಂಗ್ರೆಸ್ ಮುಖಂಡ ಹಾಗೂ ರೌಡಿಶೀಟರ್ ಡೇವಿಡ್ನನ್ನು ಹಾಡಹಗಲೇ, ಕಾಡತೂಸಿನಿಂದ ಹೊರಬಿದ್ದ ಗುಂಡುಗಳು ಆತನ ಎದೆಯನ್ನು ಸೀಳಿ ಜೀವ ಕಿತ್ತುಕೊಂಡಿದ್ದವು. ಹತ್ಯೆಯ ತನಿಖೆ ಆರಂಭವಾಗುತ್ತಿದ್ದಂತೆ ಮುನ್ನಲೆಗೆ ಬಂದ ಹೆಸರು — HP. H ಎಂದರೆ ಹೇಮಂತ್, P ಎಂದರೆ ಪೂಜಾರಿ. ದಶಕಗಳಿಂದ ಆತ ಸತ್ತಿದ್ದಾನೆ ಎಂಬ ಮಾತುಗಳ ನಡುವೆಯೇ, ಡೇವಿಡ್ ಹತ್ಯೆ ಪ್ರಕರಣದ ಬಳಿಕ ಭೂಗತ ಲೋಕದ ಪಾತಕಿ ಎಂದು ಗುರುತಿಸಲ್ಪಟ್ಟ ಹೇಮಂತ್ ಪೂಜಾರಿಯ ಇರುವಿಕೆಯ ಬಗ್ಗೆ ಮತ್ತೆ ಚರ್ಚೆಗಳು ಆರಂಭವಾದವು. ಇದೀಗ ಆತ ನೇಪಾಳದಲ್ಲಿ ಬಂಧಿತನಾಗಿದ್ದಾನೆ ಎಂಬ ಮಾಹಿತಿ ಹರಿದಾಡುತ್ತಿದೆ.
ನಂಬಲರ್ಹ ಮೂಲಗಳ ಪ್ರಕಾರ, ಸಂಬಂಧಪಟ್ಟ ವ್ಯಕ್ತಿಯನ್ನು ಸುಮಾರು ಮೂರು ದಿನಗಳ ಹಿಂದೆಯೇ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಇದೆ. ಆದರೆ ಆತನನ್ನು ಭಾರತದ ಯಾವ ತನಿಖಾ ಸಂಸ್ಥೆ ವಶಕ್ಕೆ ಪಡೆದುಕೊಂಡಿದೆ..? ಆತ ನಿಜವಾಗಿಯೂ ಯಾವ ದೇಶದಲ್ಲಿ ಬಂಧಿತನಾಗಿದ್ದಾನೆ..? ಎಂಬ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ದೊರೆತಿಲ್ಲ. ಇದರ ಜತೆಗೆ ಮತ್ತೊಂದು ಕುತೂಹಲಕಾರಿ ಪ್ರಶ್ನೆ ಹುಟ್ಟಿಕೊಂಡಿದೆ — ಬಂಧಿತನಾಗಿರುವ ವ್ಯಕ್ತಿಯೇ ಅಸಲಿ ಹೇಮಂತ್ ಪೂಜಾರಿಯೇ....?
ಇತಿಹಾಸದಲ್ಲಿ ಹಲವು ಪ್ರಭಾವಿ ನಾಯಕರು ಮತ್ತು ಕುಖ್ಯಾತ ವ್ಯಕ್ತಿಗಳು ತಮ್ಮ ಜೀವ ರಕ್ಷಣೆಗಾಗಿ ತಮ್ಮನ್ನು ಹೋಲುವ ವ್ಯಕ್ತಿಗಳನ್ನು ಬಳಸಿಕೊಂಡ ಉದಾಹರಣೆಗಳ ಬಗ್ಗೆ ಸಾಕಷ್ಟು ಕಥನಗಳು ಮತ್ತು ವರದಿಗಳಿವೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು, ಶತ್ರುಗಳ ಕಣ್ಣು ತಪ್ಪಿಸಲು ಅಥವಾ ತನಿಖಾ ಸಂಸ್ಥೆಗಳನ್ನು ದಾರಿ ತಪ್ಪಿಸಲು ‘ಬಾಡಿ ಡಬಲ್’ ತಂತ್ರ ಬಳಸಲಾಗಿದೆ ಎಂಬ ಉಲ್ಲೇಖಗಳೂ ಕೇಳಿಬಂದಿವೆ. ಹಾಗಾದರೆ, ಇದೇ ರೀತಿಯ ತಂತ್ರವನ್ನು HP ಕೂಡ ಅನುಸರಿಸಿದ್ದಾನೆಯೇ....? ಈ ಪ್ರಶ್ನೆಗೆ ಕಾರಣವಾಗಿರುವುದು ಆತನ ಕುರಿತು ಹರಿದಾಡುತ್ತಿರುವ ಕೆಲವು ಮಾಹಿತಿ. ತನ್ನ ಧ್ವನಿಯನ್ನು ಹೋಲುವ ವ್ಯಕ್ತಿಯ ಮೂಲಕ ಕರೆಗಳನ್ನು ಮಾಡಿಸುತ್ತಿದ್ದ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಈ ಮಾಹಿತಿ ತನಿಖೆಯಲ್ಲಿ ಸತ್ಯವೆಂದು ದೃಢಪಟ್ಟರೆ, ಈಗ ಬಂಧಿತನಾಗಿರುವ ವ್ಯಕ್ತಿ ಅಸಲಿ HPನಾ? ಅಥವಾ HPಯಂತೆ ಕಾಣುವ ಡೂಪ್ನಾ...? ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಾಗುತ್ತದೆ. ಆದರೆ ಈ ಎಲ್ಲಾ ಅಂಶಗಳಿಗೆ ತನಿಖಾ ಸಂಸ್ಥೆಗಳ ಅಧಿಕೃತ ದೃಢೀಕರಣ ಇನ್ನಷ್ಟೇ ದೊರೆಯಬೇಕಿದೆ.
“ಉದಯ್ ಹುಸೇನ್ ಮತ್ತು ಲತೀಫ್ ಯಾಹಿಯಾ”
ಇರಾಕ್ನ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್ ಅವರ ಪುತ್ರ ಉದಯ್ ಹುಸೇನ್ಗೆ ಸಂಬಂಧಿಸಿದಂತೆ ಲತೀಫ್ ಯಾಹಿಯಾ ಎಂಬಾತ ಬಾಡಿ ಡಬಲ್ ಆಗಿ ಕಾರ್ಯನಿರ್ವಹಿಸಿದ್ದ ಎಂಬ ಕಥನ ಅತ್ಯಂತ ಪ್ರಸಿದ್ಧವಾದುದು. ಯಾಹಿಯಾ ತನ್ನ ಆತ್ಮಕಥನಗಳಲ್ಲಿ ಉದಯ್ನಂತೆಯೇ ಕಾಣಿಸಿಕೊಳ್ಳಲು ತನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಈ ಘಟನೆಯ ಹಲವು ವಿವರಗಳು ವರ್ಷಗಳಿಂದ ಚರ್ಚೆ ಮತ್ತು ವಿವಾದಕ್ಕೂ ಒಳಪಟ್ಟಿವೆ.
ಮೆಕ್ಸಿಕೋದ ಸಿನಾಲೋವಾ ಕಾರ್ಟೆಲ್ ಮುಖ್ಯಸ್ಥ ಜೋಕ್ವಿನ್ ‘ಎಲ್ ಚಾಪೊ’ ಗುಜ್ಮನ್ ತನ್ನ ಚಲನವಲನಗಳನ್ನು ಮರೆಮಾಚಲು ವಿವಿಧ ವಂಚನಾ ತಂತ್ರಗಳನ್ನು ಬಳಸುತ್ತಿದ್ದ ಎಂಬ ವರದಿಗಳು ಹಿಂದಿನಿಂದಲೂ ಕೇಳಿಬಂದಿವೆ. ತನ್ನಂತೆಯೇ ಕಾಣುವ ಅಥವಾ ಒಂದೇ ರೀತಿಯ ವೇಷಭೂಷಣ ಧರಿಸಿದ ವ್ಯಕ್ತಿಗಳನ್ನು ಬಳಸುತ್ತಿದ್ದ ಎಂಬ ಕಥನಗಳೂ ಪ್ರಚಲಿತದಲ್ಲಿವೆ.
ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಆರೋಪಿಗಳ ಪಟ್ಟಿಯಲ್ಲಿರುವ ದಾವೂದ್ ಇಬ್ರಾಹಿಂ ಕುರಿತು ಕೂಡ ಹಲವು ವರ್ಷಗಳಿಂದ ‘ಡೂಪ್’ಗಳ ಬಳಕೆಯ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಈ ಕುರಿತು ಸಾರ್ವಜನಿಕವಾಗಿ ಲಭ್ಯವಿರುವ ದೃಢೀಕೃತ ಮಾಹಿತಿಯನ್ನು ಎಚ್ಚರಿಕೆಯಿಂದಲೇ ಪರಿಗಣಿಸಬೇಕಾಗಿದೆ.
ದ್ವಿತೀಯ ಮಹಾಯುದ್ಧದ ಕಾಲದಲ್ಲಿ ಅಡಾಲ್ಫ್ ಹಿಟ್ಲರ್ ಬಾಡಿ ಡಬಲ್ಗಳನ್ನು ಬಳಸಿದ್ದ ಎಂಬ ಅನೇಕ ಕಥೆಗಳು ಇತಿಹಾಸದಲ್ಲಿ ಕೇಳಿಬಂದಿವೆ. ಆದರೆ ಹಿಟ್ಲರ್ನ ಹೆಸರಿನಲ್ಲಿ ಪ್ರಚಲಿತವಾಗಿರುವ ಹಲವು ‘ಡೂಪ್’ ಕಥೆಗಳ ಐತಿಹಾಸಿಕ ಸತ್ಯಾಸತ್ಯತೆ ಇಂದಿಗೂ ಚರ್ಚೆಯ ವಿಷಯವಾಗಿದೆ.
ಮಾಫಿಯಾ ಮತ್ತು ಭೂಗತ ಜಗತ್ತಿನಲ್ಲಿ ಎದುರಾಳಿಗಳ ಕಣ್ಣು ತಪ್ಪಿಸಲು, ಪೊಲೀಸರ ನಿಗಾವನ್ನು ಗೊಂದಲಕ್ಕೀಡು ಮಾಡಲು ಅಥವಾ ದಾಳಿಯ ಅಪಾಯದಿಂದ ತಪ್ಪಿಸಿಕೊಳ್ಳಲು ಒಂದೇ ರೀತಿಯ ವೇಷಭೂಷಣ ಹಾಗೂ ವಾಹನಗಳನ್ನು ಬಳಸುವುದು ಹೊಸ ತಂತ್ರವಲ್ಲ. ಹಲವು ಗ್ಯಾಂಗ್ಗಳು ತಮ್ಮ ಪ್ರಮುಖರ ಚಲನವಲನವನ್ನು ಮರೆಮಾಚಲು ಇಂತಹ ತಂತ್ರಗಳನ್ನು ಬಳಸಿವೆ ಎಂಬ ವರದಿಗಳಿವೆ.
ವಿದೇಶಕ್ಕೆ ಪರಾರಿಯಾಗಿದ್ದ ಹೇಮಂತ್ ಪೂಜಾರಿಯನ್ನು ಪತ್ತೆಹಚ್ಚಿ ಬಂಧಿಸಲು 2016 ಡಿಸೆಂಬರ್ 20 ರಂದು ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿತ್ತು. ಇದು ಡಿಸೆಂಬರ್ 2021 ರವರೆಗೆ ಚಾಲ್ತಿಯಲ್ಲಿತ್ತು. ನಂತರ ಆತ ಸತ್ತಿದ್ದಾನೆ ಎಂಬ ವದಂತಿಗಳಿದ್ದವು. ಡೇವಿಡ್ ಪ್ರಕರಣದ ಬಳಿಕ ಆತನ ಹೆಸರು ಮುನ್ನಲೆಗೆ ಬಂದಿದ್ದು, ಖಾಕಿ ಆತನ ಜಾಡು ಪತ್ತೆಹಚ್ಚಲು ಆರಂಭಿಸಿದ್ದವು. ಇಂಟರ್ಪೋಲ್ ಅಧಿಕಾರಿಗಳು ಈ ಬಗ್ಗೆ ಹೆಚ್ಚು ನಿಗಾ ಇಟ್ಟಿದ್ದರು.
ಡೇವಿಡ್ ಹತ್ಯೆ ಪ್ರಕರಣದ ತನಿಖೆ ಈಗ ಹಲವು ಕುತೂಹಲಕಾರಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನೇಪಾಳದಲ್ಲಿ ಬಂಧನವಾಗಿದೆ ಎಂಬ ಮಾಹಿತಿ ನಿಜವೇ..? ಬಂಧಿತನಾಗಿರುವ ವ್ಯಕ್ತಿ ಯಾರು..? ಆತ ಅಸಲಿ ಹೇಮಂತ್ ಪೂಜಾರಿಯೇ..? ಅಥವಾ ತನಿಖೆಯನ್ನು ಗೊಂದಲಕ್ಕೀಡು ಮಾಡುವ ಮತ್ತೊಂದು ನೆರಳೇ...?
“ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ, ವದಂತಿಗಳಿಗಿಂತ ತನಿಖೆಯ ಅಧಿಕೃತ ದಾಖಲೆಗಳನ್ನೇ ಕಾಯಬೇಕಿದೆ. ಏಕೆಂದರೆ, ಅಪರಾಧ ಎಷ್ಟೇ ಪರಿಪೂರ್ಣವಾಗಿ ರೂಪುಗೊಂಡಿದ್ದರೂ, ಪರಿಪೂರ್ಣ ತನಿಖೆಯ ಮುಂದೆ ಸತ್ಯ ಹೆಚ್ಚು ಕಾಲ ಅಡಗಿರಲು ಸಾಧ್ಯವಿಲ್ಲ.”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”