ಡೇವಿಡ್ ಹತ್ಯೆಯಿಂದ ಲಾಭ ಯಾರಿಗೆ..?

ಉಡುಪಿ: 9 mm ಕಾಡತೂಸಿನಿಂದ ಹಾರಿದ ಗುಂಡುಗಳು ಮುದರಂಗಡಿಯ ಪೇಟೆಯಲ್ಲಿ ಡೇವಿಡ್ ತಲೆಯನ್ನು ಸೀಳಿ ಹಾಕಿತ್ತು. ರಕ್ತಸಿಕ್ತವಾಗಿ ಬಿದ್ದ ದೇಹವನ್ನು ಕಂಡು ಸ್ಥಳೀಯರು ನಿಬ್ಬೆರಗಾಗಿದ್ದರು. ಅಷ್ಟರಲ್ಲೇ ಕಂಟ್ರೋಲ್ ರೂಮ್ನಿಂದ ಹೊರಬಿದ್ದ ಧ್ವನಿಯಲ್ಲಿ ಆತಂಕ. ಅಷ್ಟೇ, ಮಾಹಿತಿ ರವಾನೆಯಾದ ಮರುಕ್ಷಣವೇ ಖಾಕಿ ಪಡೆ ತನ್ನ ಸೈನ್ಯದ ತುಕುಡಿಗಳಿಗೆ ಹಲವು ಜವಾಬ್ದಾರಿಯನ್ನು ಹೆಗಲಿಗೇರಿಸಿತ್ತು. ತಕ್ಷಣ ಕಾರ್ಯ ಪ್ರವೃತ್ತವಾದ ಪೋಲಿಸ್ ತಂಡವು ಶೂಟರ್ ಹಾಗು ಆತನ ಸಹಚರರನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಆದರೆ ನಂತರ ಅವರಿಗೆ Big Challenge ಕಾದಿತ್ತು. ಅಸಲಿಗೆ ಶೂಟರ್ಗಳನ್ನು ಕಳಿಸಿದ್ದು ಯಾರು..? ಮಾಸ್ಟರ್ ಮೈಂಡ್ ಯಾರದ್ದು..? ಸ್ಥಳೀಯರ ಪಾತ್ರವಿಲ್ಲದೇ ಇಷ್ಟೊಂದು ದೊಡ್ಡ ಕ್ರೈಮ್ ನಡೆಯಲು ಸಾಧ್ಯವೇ..? ಸ್ವ - ಹಿತಾಸಕ್ತಿ ಇಲ್ಲದೇ ಯಾವುದೇ ಅಪರಾಧವು ಘಟಿಸುವುದಿಲ್ಲ ಅಲ್ಲವೇ..? ಅತ್ಯಂತ ಮುಖ್ಯವಾಗಿ Motive..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹಲವು ರಾಜ್ಯಕ್ಕೆ ಖಾಕಿ ತಂಡ ತೆರಳಿತ್ತು. ಆದರೆ ಕೊನೆಗೆ ಅವರೆಲ್ಲರ ಪ್ರಶ್ನೆಗಳಿಗೆ 70% ಉತ್ತರ ಸಿಕ್ಕಿದ್ದು ಎರ್ಮಾಳಿನಲ್ಲೇ..!
ಶೂಟರ್ ಖಾತೆಗೆ ಹಣ ವರ್ಗಾಯಿಸಿದ ಬಗ್ಗೆ ದೊರಕಿದ ಮಾಹಿತಿಯನ್ನು ಆಧರಿಸಿ ನಡೆಸಿದ "ಆಪರೇಶನ್ ಎರ್ಮಾಳ್" ಕಾರ್ಯಾಚರಣೆಯೇ ರೋಚಕವಾಗಿತ್ತು. ಆರಂಭದಲ್ಲಿ ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ನಡೆಸಿದ ಬಳಿಕ ಆತನ ಪಾತ್ರವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ನಂತರ ಖಾಕಿಯ ಕಣ್ಣು ಚಿರಾಗ್ ಹಾಗು ಇರ್ಷಾದ್ ಮೇಲೆ ಬೀಳುತ್ತದೆ. ಅವರನ್ನು ಬಂಧಿಸಿದಾಗ ಅಸಲಿ ವಿಚಾರಗಳು ಬೆಳಕಿಗೆ ಬರುತ್ತದೆ.
ಚಿರಾಗ್ ಹಾಗು ಇರ್ಷಾದ್ಗೆ ಇಂಟರ್ನೆಟ್ ಕರೆ ಮೂಲಕ ಹಣವನ್ನು ಪಡೆಯಲು ನಿಗದಿತ ಸ್ಥಳಕ್ಕೆ ಬರಲು ಹೇಳಲಾಗುತ್ತಿತ್ತು. ಮೊದಲೇ ಹಣವನ್ನು ಯಾವ ಕಲರ್ ಶರ್ಟ್ ಧರಿಸಿದ ವ್ಯಕ್ತಿ ತರುತ್ತಾನೆ ಎಂಬ ಮಾಹಿತಿ ನೀಡಲಾಗುತ್ತಿತ್ತು. ಹಾಗೇ ಬೈಕ್ನಲ್ಲಿ ಹೆಲ್ಮೆಟ್ ಹಾಕಿಕೊಂಡು, ಮುಖ ಮುಚ್ಚಿಕೊಂಡು ಬಂದ ವ್ಯಕ್ತಿ ಹಣ ಕೊಟ್ಟು ತೆರಳುತ್ತಿದ್ದನು ಎಂದು ಮೂಲಗಳು ತಿಳಿಸಿವೆ.
ಹಣವನ್ನು ಪಡೆದ ಚಿರಾಗ್ ಹಾಗು ಇರ್ಷಾದ್ ತಮಗೆ ಮೊದಲೇ ಕೊಟಿದ್ದ ಸೂಚನೆಯಂತೆ, ಆರೋಪಿಗಳ ಖಾತೆಗೆ ಹಣವನ್ನು ವರ್ಗಾಯಿಸುತ್ತಿದ್ದರು. ಬೈಕ್ನಲ್ಲಿ ಹಣವನ್ನು ತಂದುಕೊಡುತ್ತಿದ್ದ ವ್ಯಕ್ತಿ ಯಾರೆಂದು ಇವರಿಬ್ಬರಿಗೂ ಗೊತ್ತಿಲ್ಲ. ಗುರುತೇ ಸಿಗದಂತೆ ಸಿದ್ದವಾಗಿ ಬರುತ್ತಿದ್ದ ವ್ಯಕ್ತಿಯಿಂದ ಇವರು ಹಣವನ್ನು ಪಡೆಯುತ್ತಿದ್ದರು ಎನ್ನಲಾಗಿದೆ.
ಮೂಲಗಳ ಮಾಹಿತಿಯ ಪ್ರಕಾರ ವಿವಿಧ ಹಂತಗಳಲ್ಲಿ ಕಳೆದ 3-4 ತಿಂಗಳಿನಿಂದ ಆರೋಪಿಗಳ ಖಾತೆಗೆ ಒಟ್ಟು ಅಂದಾಜು ₹ 9 ಲಕ್ಷ ಹಣವನ್ನು ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.
ನಂಬಲು ಅರ್ಹವಾದ ಮೂಲಗಳು ತಿಳಿಸಿರುವಂತೆ ಚಿರಾಗ್ ಹಾಗು ಇರ್ಷಾದ್ನ ನಂತರದ ಕೊಂಡಿಗಳನ್ನು ತಲುಪಲು ಪೋಲಿಸರಿಗೆ ಬಹಳ ಕಷ್ಟವಾಗಿತ್ತು. ಹಣ ತಂದುಕೊಡುತ್ತಿದ್ದ ವ್ಯಕ್ತಿಯ ಗುರುತು ಗೊತ್ತಿರಲಿಲ್ಲ. ಹೆಲ್ಮೆಟ್, ಮುಖ ಮುಚ್ಚುವಿಕೆ ಹಾಗೂ ನಿಗದಿತ ಸ್ಥಳದಲ್ಲಿ ಹಣ ಹಸ್ತಾಂತರಿಸುವ ತಂತ್ರ ತನಿಖೆಗೆ ಸವಾಲಾಗಿತ್ತು. ಇಲ್ಲಿಯೇ ತನಿಖೆ ಮತ್ತೊಂದು ಹಾದಿ ಹಿಡಿಯಿತು.
Criminology ಹಾಗೂ forensic investigationನಲ್ಲಿ ಪ್ರಸಿದ್ಧವಾಗಿರುವ Locard’s Exchange Principle. ಇದರ ಮೂಲ ಆಶಯವೇ — “ಪ್ರತಿ ಸಂಪರ್ಕವೂ ಯಾವುದೋ ಒಂದು ಗುರುತು ಬಿಡುತ್ತದೆ.” ಅಪರಾಧಿ ತನ್ನ ಗುರುತನ್ನು ಮರೆಮಾಡಿಕೊಂಡರೂ, ಆತನ ಚಲನವಲನ, ಸಂಪರ್ಕ ಹಾಗೂ crime scene ಸುತ್ತಮುತ್ತ ಉಳಿಯುವ ಸುಳಿವುಗಳು ತನಿಖೆಗೆ ದಾರಿ ಮಾಡಿಕೊಡಬಹುದು. ಈ ಆಶಯದಂತೆ, ತನಿಖಾಧಿಕಾರಿಯ ಚಾಣಾಕ್ಷತೆ ಬೀಟ್ ಪೊಲೀಸ್ ಮಾಹಿತಿಗಳು, ಸಿಸಿಟಿವಿ ದೃಶ್ಯಗಳು ಹಾಗೂ ಲಭ್ಯವಿದ್ದ ಇತರ ಸುಳಿವುಗಳನ್ನು ಒಂದಕ್ಕೊಂದು ಜೋಡಿಸುತ್ತಾ ಪೊಲೀಸರು ಮುಂದುವರಿದರು ಎನ್ನಲಾಗಿದೆ. ಒಂದೊಂದು ಕೊಂಡಿ ಮತ್ತೊಂದು ಕೊಂಡಿಗೆ ದಾರಿ ಮಾಡಿಕೊಡುತ್ತಾ ಕೊನೆಗೆ ಸದಾನಂದನ ಜಾಡು ಹಿಡಿಯಲಾಯಿತು. ಆಗ ಬೆಳಕಿಗೆ ಬಂದ ಹೆಸರು — ಕಿಶೋರ್ ಪೂಜಾರಿ ಅಲಿಯಾಸ್ ಕೆಪಿ..!
ಭೂಗತ ಪಾತಕಿ ಹೇಮಂತ್ ಪೂಜಾರಿಯ ತಮ್ಮನಾದ ಕಿಶೋರ್ ಪೂಜಾರಿ ಮುಂಬೈಯಲ್ಲಿ "ಮೋಕೋಕಾ" ಕಾಯ್ದೆಯಲ್ಲಿ ಬಂಧನಕ್ಕೆ ಒಳಗಾಗಿದ್ದ ಕುಖ್ಯಾತ. ಅಣ್ಣ ಹೇಮಂತ್ ಪೂಜಾರಿ ಕಣ್ಮರೆಯಾಗಿದ್ದ. ಸತ್ತಿದ್ದಾನೆ ಎಂದೇ ಭಾವಿಸಲಾಗಿತ್ತು. ಆದರೆ ಇಬ್ಬರು ದಶಕಗಳಿಂದ ನೆತ್ತರ ಜಗ್ಗತ್ತಿನಿಂದ ದೂರ ಇದ್ದವರು. ಮುಪ್ಪಿನ ವಯಸ್ಸಲ್ಲಿ ನೆತ್ತರ ರುಚಿ ನೋಡುವ ಆಸೆ ಈತನಿಗೇ ಹುಟ್ಟಿತೆ..? ಅಣ್ಣ ಹೇಮಂತ್ ಪೂಜಾರಿಯ ಪಾತ್ರವೇನು..? ಈಗ ಈ ಪ್ರಶ್ನೆಗೆ ಉತ್ತರ ಕೊಡಬೇಕಾದ ಕಿಶೋರ್ ಪೂಜಾರಿ ಪೋಲಿಸರ ಅತಿಥಿಯಾಗಿದ್ದಾನೆ. ಆತನ ವಿಚಾರಣೆಯ ಬಳಿಕ ನೈಜ ಸಂಗತಿ ಹೊರಬೇಕಿದೆ. ಆದರೆ ಇಲ್ಲಿ ಮತ್ತೊಂದು ದೊಡ್ಡ ಪ್ರಶ್ನೆ ಪೊಲೀಸರ ಮುಂದಿದೆ.
Criminologyಯ “ಅಪರಾಧದ ಸಿದ್ಧಾಂತಗಳ — Theories of Crime / Theories of Criminal Behaviour — ಅಧ್ಯಾಯದಲ್ಲಿ ಚರ್ಚೆಯಾಗುವ Rational Choice Theory (Rational Calculation) ಪ್ರಕಾರ, ಅಪರಾಧದ ನಿರ್ಧಾರದಲ್ಲಿ ವ್ಯಕ್ತಿಯ ಲಾಭ–ನಷ್ಟದ ಲೆಕ್ಕಾಚಾರವೂ ಪ್ರಮುಖ ಪಾತ್ರ ವಹಿಸಬಹುದು. ಸರಳವಾಗಿ ಹೇಳುವುದಾದರೆ— “ನನಗೆ ಇದರಿಂದ ಏನು ಲಾಭ..? ಸಿಕ್ಕಿಬಿದ್ದರೆ ಏನು ನಷ್ಟ..?” ಎಂಬ ಲೆಕ್ಕಾಚಾರ ಅಪರಾಧದ ನಿರ್ಧಾರದ ಹಿಂದೆ ಇರಬಹುದು. ಡೇವಿಡ್ ಹತ್ಯೆ ಪ್ರಕರಣದಲ್ಲೂ ತನಿಖಾಧಿಕಾರಿಗಳ ಮುಂದಿರುವ ಪ್ರಶ್ನೆ ಇದೇ. ಶೂಟರ್ಗಳಿಗೆ ಹಣ ತಲುಪಿದ್ದು ಹೇಗೆ..? ₹9 ಲಕ್ಷದ ಹಣದ ಹರಿವಿನ ಹಿಂದೆ ಯಾರ ಹಿತಾಸಕ್ತಿ..? ಶೂಟರ್ಗಳನ್ನು ಆಯ್ಕೆ ಮಾಡಿದ್ದು ಯಾರು..? ಇಷ್ಟೊಂದು ಅಪಾಯದ ಕೆಲಸ ಮಾಡಿಸುವ ಅಗತ್ಯ ಯಾರಿಗಿತ್ತು..? ಹಣದ ಕೊಂಡಿಗಳು ಒಂದೆಡೆ ಸಾಗುತ್ತಿದ್ದರೆ, ಮತ್ತೊಂದೆಡೆ Motiveನ ಹುಡುಕಾಟವೂ ಮುಂದುವರಿದಿದೆ. ಅಪರಾಧಿ ಯಾರು ಎಂಬ ಪ್ರಶ್ನೆಗೆ ಸುಳಿವುಗಳು ದಾರಿ ತೋರಿಸಿದರೆ, ಅಪರಾಧ ನಡೆಯಬೇಕಾದ ಅಗತ್ಯ ಯಾರಿಗಿತ್ತು ಎಂಬ ಪ್ರಶ್ನೆಗೆ ‘Motive’ ಮತ್ತು ‘Benefit’ಗಳ ಹುಡುಕಾಟ ಉತ್ತರ ನೀಡಬಹುದೇ..? ಅಂದರೆ, ಅಪರಾಧ ನಡೆದದ್ದು ಹೇಗೆ ಎಂಬುದನ್ನು ಪತ್ತೆಹಚ್ಚುವ ತನಿಖೆಯ ಜೊತೆಗೆ, ಈ ಅಪರಾಧದಿಂದ ಕೊನೆಗೆ ಯಾರಿಗೆ ಲಾಭವಾಗುತ್ತಿತ್ತು ಎಂಬ ಲೆಕ್ಕಾಚಾರವೂ ಈಗ ಮುಖ್ಯವಾಗಿದೆ. ಈ ಲೆಕ್ಕಾಚಾರ ಹಾಕಿದ ಮಾಸ್ಟರ್ ಮೈಂಡ್ ಯಾರು..? ಎಂಬ ಪ್ರಶ್ನೆಗೆ ಸ್ಪಷ್ಟತೆ ಸಿಗಬೇಕಿದೆ.
ಪೊಲೀಸರು ಇದುವರೆಗೆ ಕಿಶೋರ್ ಪೂಜಾರಿ ಹಾಗೂ ಸದಾನಂದ ಅವರನ್ನು ಬಂಧಿಸಿಲ್ಲ. ವಿಚಾರಣೆ ನಡೆಸುತ್ತಿದ್ದಾರೆ. ಇವರಿಬ್ಬರ ಪಾತ್ರವನ್ನು ದೃಢಪಡಿಸುವಷ್ಟು ಬಲವಾದ ಸಾಕ್ಷ್ಯಗಳು ದೊರೆತರೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ಸದ್ಯಕ್ಕೆ ಇವರ ಹೆಸರುಗಳು ತನಿಖೆಯ ಕೊಂಡಿಗಳಷ್ಟೇ; ಅಂತಿಮ ಸತ್ಯ ತನಿಖೆ ಹಾಗೂ ಸಾಕ್ಷ್ಯಗಳಿಂದಲೇ ಹೊರಬರಬೇಕಿದೆ. ಆದರೆ ಒಂದು ಸಂಗತಿ ಮಾತ್ರ ಸ್ಪಷ್ಟ. ಶೂಟರ್ಗಳು ಸಿಕ್ಕಿದ್ದಾರೆ. ಹಣದ ಕೊಂಡಿಗಳು ಸಿಕ್ಕಿವೆ. ಎರ್ಮಾಳಿನ ಕೊಂಡಿ ಸಿಕ್ಕಿದೆ. ಇನ್ನು ಉಳಿದಿರುವುದು ಒಂದೇ ಪ್ರಶ್ನೆ— ಗುಂಡು ಹಾರಿಸಿದವರು ಸಿಕ್ಕಿದ್ದಾರೆ… ಆದರೆ ಆ ಗುಂಡಿನ ಹಿಂದಿನ ಲೆಕ್ಕ ಹಾಕಿದವನು ಯಾರು..?
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”