ಶಿರೂರಿನಲ್ಲಿ ಎಸ್ಕೇಪ್… ಪೈಯ್ಯಾರಿನಲ್ಲಿ ಇನ್ನೋವಾ..!

ಕಾಪು: ಇಲ್ಲಿನ ಪೈಯ್ಯಾರು ಮಲೆ ಜುಮಾದಿ ಸಾನದ ಬಳಿಯ ಹಾಡಿಯಲ್ಲಿ ಬುಧವಾರ ಇನ್ನೋವಾ ಕಾರೊಂದು ಪತ್ತೆಯಾಗಿದ್ದು, ದನ ಕಳ್ಳತನದ ವಾಹನ ಆಗಿರಬಹುದೆಂದು ಸ್ಥಳೀಯರು ಶಂಕಿಸಿದ್ದಾರೆ. ಇನ್ನೋವಾ ಕಾರಿನ ಎಡಭಾಗ ಹಾಗು ಬಲಭಾಗದಲ್ಲಿ ನಜ್ಜುಗುಜ್ಜಾಗಿದ್ದು, ಕಾರಿನ ಗಾಜುಗಳು ಒಡೆದುಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಾರಿನ ಮುಂಭಾಗ ಹಾಗು ಹಿಂಭಾಗದ ಕಾರಿನ ನಂಬರ್ ಪ್ಲೇಟ್ಗಳನ್ನು ಕಳಚಿಡಲಾಗಿತ್ತು. ಢಿಕ್ಕಿಯಲ್ಲಿ ಹೊನ್ನಾವರ ಹಾಗು ಮಧ್ಯಭಾಗದ ಸೀಟಿನಲ್ಲಿ ಸಾಗರ ನೊಂದಣಿಯ ನಂಬರ್ ಪ್ಲೇಟ್ಗಳು ದೊರಕಿದೆ.
ಬೈಂದೂರು ಠಾಣಾ ವ್ಯಾಪ್ತಿಯ ಶಿರೂರು ಟೋಲ್ ಬಳಿ ಖಚಿತ ಮಾಹಿತಿ ಆಧರಿಸಿ ತಪಾಸಣೆ ನಡೆಸುತ್ತಿದ್ದ ಪೋಲಿಸರನ್ನು ತಪ್ಪಿಸಿಕೊಂಡು ಇನ್ನೋವಾ ಕಾರು ಮಂಗಳವಾರ ತಡರಾತ್ರಿ ಪರಾರಿಯಾಗಿದ್ದು, ಅದೇ ಕಾರು ಇದಾಗಿದೆ ಎಂದು ಹೇಳಲಾಗಿದೆ.
ದನಕಳ್ಳತನ ಪ್ರಕರಣದಲ್ಲಿ ಅನೇಕ ಆರೋಪಿಗಳು ಪೈಯ್ಯಾರು, ಬೆಳಪು ಭಾಗದವರಾಗಿದ್ದಾರೆ. ಶಿರ್ವ ಠಾಣೆಯಲ್ಲಿಯೂ ಈ ಹಿಂದೆ. ಅನೇಕ ಪ್ರಕರಣಗಳು ದಾಖಲಾಗಿತ್ತು. ಹೀಗಾಗಿ ಶಿರೂರಿನಿಂದ ಅಂದಾಜು 100 ಕಿಮೀ ಇರುವ ಪೈಯ್ಯಾರಿಗೆ ಬರಬೇಕೆಂದರೇ, ಈ ಮಾರ್ಗವನ್ನು ಸೂಚಿಸಿದವರು ಯಾರು ಎಂಬ ಪ್ರಶ್ನೆ ಹುಟ್ಟುಹಾಕಿದೆ. ಈ ಭಾಗದ ಆರೋಪಿಗಳ ಸಹಕಾರವಿಲ್ಲದೇ ಈ ಜಾಗದಲ್ಲಿ ಕಾರು ನಿಲ್ಲಿಸಿ ಪರಾರಿಯಾಗಲು ಸಾಧ್ಯವಿಲ್ಲ ಎಂದು ಸ್ಥಳೀಯರು ಅನುಮಾನಿಸಿದ್ದು, ಕಾರಿನಲ್ಲಿ ಈ ಭಾಗದ ಆರೋಪಿಗಳು ಇದ್ದರೇ ಎಂಬ ಅನುಮಾನ ವ್ಯಕ್ತವಾಗಿದೆ. ಕಳತ್ತೂರು ಗ್ರಾ.ಪಂ ಸದಸ್ಯ ಗಣೇಶ್ ಶೆಟ್ಟಿ ಪೈಯ್ಯಾರು, ಮಾಜಿ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ರಾಜೇಶ್ ಕುಲಾಲ್, ರಾಜ್ಕಿರಣ್ ಶೆಟ್ಟಿ, ಸಂತೋಷ್ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿದರು.
ಕಾರಿನ ಎಡಬದಿಯ ಹಿಂಭಾಗದ ಚಕ್ರದಲ್ಲಿ ಮಾತ್ರ ಸಗಣಿ ಪತ್ತೆಯಾಗಿದೆ. ಇದು ಕಾರಿನಲ್ಲಿ ದನಕಳ್ಳತನಕ್ಕೆ ಯತ್ನಿಸಲಾಗಿತ್ತೇ...? ಎಂಬ ಪ್ರಶ್ನೆಗೆ ಮತ್ತಷ್ಟು ಪುಷ್ಠಿಯಲ್ಲಿ ನೀಡಿದೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”