ಬಂಧಿತರ ಸಂಖ್ಯೆ 7 ಕ್ಕೆ ಏರಿಕೆ

ಉಡುಪಿ: ಕಾಪು ತಾಲೂಕು ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್ನಲ್ಲಿ ಪ್ರಿನ್ಸ್ ಎಂಟರ್ಪ್ರೈಸಸ್ ಮಾಲಕ ಡೇವಿಡ್ ಡಿಸೋಜಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣದ ತನಿಖೆ ಮುಂದುವರಿದಿದ್ದು, ಪ್ರಕರಣದಲ್ಲಿ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಪ್ರಮುಖ ಆರೋಪಿಗಳಾದ ಸದಾನಂದ ದೇವಾಡಿಗ (41) ಹಾಗೂ ಕಿಶೋರ್ ಪೂಜಾರಿ (47) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆ.7ರಂದು ಮಧ್ಯಾಹ್ನ 3.45ರ ಸುಮಾರಿಗೆ ಮೋಟಾರ್ ಸೈಕಲ್ನಲ್ಲಿ ಬಂದಿದ್ದ ಆರೋಪಿಗಳ ಪೈಕಿ ರಾಜು ಪಿಸ್ತೂಲ್ನಿಂದ ಡೇವಿಡ್ ಡಿಸೋಜಾ ಅವರ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪಿಗಳಾದ ಅನ್ಮೋಲ್ ರಸ್ತೋಗಿ ಹಾಗೂ ಜಿಯಾಹುಲ್ ವಾಜುಲ್ ಶೇಖ್ @ ದೀಪಕ್ ಅವರನ್ನು ಪೊಲೀಸರು ಈಗಾಗಲೇ ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಆರೋಪಿಗಳ ಬ್ಯಾಂಕ್ ಖಾತೆಗಳ ವಿವರ ಪರಿಶೀಲನೆ ನಡೆಸಿದಾಗ, ಮೊಹಮ್ಮದ್ ಇರ್ಷಾದ್ ಹಾಗೂ ಚಿರಾಗ್ ಪೂಜಾರಿ ಎಂಬವರು ಆರೋಪಿಗಳಿಗೆ ಹಣ ಜಮಾ ಮಾಡಿ ಕೃತ್ಯಕ್ಕೆ ಸಹಕರಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅವರನ್ನೂ ಬಂಧಿಸಲಾಗಿದೆ. ಮುಂದುವರಿದ ತನಿಖೆಯಲ್ಲಿ ಆರೋಪಿಗಳ ಬ್ಯಾಂಕ್ ಖಾತೆಗಳು, ಮೊಬೈಲ್ ಫೋನ್ಗಳು, ಕರೆ ವಿವರಗಳು ಹಾಗೂ ಚಲನವಲನಗಳ ಸಿಸಿ ಕ್ಯಾಮರಾ ದೃಶ್ಯಗಳನ್ನು ಪೊಲೀಸರು ವಿಶ್ಲೇಷಿಸಿದ್ದಾರೆ. ಈ ವೇಳೆ ಡೇವಿಡ್ ಹತ್ಯೆಗೆ ಅಪರಾಧಿಕ ಒಳಸಂಚು ರೂಪಿಸಿ ಕೃತ್ಯಕ್ಕೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಸದಾನಂದ ದೇವಾಡಿಗ (41) ಹಾಗೂ ಕಿಶೋರ್ ರಾಮ ಪೂಜಾರಿ (47) ಅವರನ್ನು ಬಂಧಿಸಲಾಗಿದೆ.
ಬಡಾ ಎರ್ಮಾಳ್ ಗ್ರಾಮದ ಅದಮಾರು ಮಠದ ಬಳಿ ವಾಸವಾಗಿರುವ ಸದಾನಂದ ದೇವಾಡಿಗನನ್ನು ಬಂಧಿಸಿದ ಪೊಲೀಸರು, ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಎರಡು ಮೊಬೈಲ್ ಫೋನ್ಗಳು, ಒಂದು ಮೋಟಾರ್ ಸೈಕಲ್ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ. ಉಚ್ಚಿಲ ಬಡಾ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದ ಬಳಿ ವಾಸವಾಗಿರುವ ಕಿಶೋರ್ ರಾಮ ಪೂಜಾರಿಯನ್ನು ಬಂಧಿಸಿ, ಆತನಿಂದ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಮೂರು ಮೊಬೈಲ್ ಫೋನ್ಗಳು ಹಾಗೂ ಒಂದು ಕ್ರೇಟಾ ಕಾರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ
ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾನೆ ಎನ್ನಲಾದ ಆರೋಪಿ ರಾಜು, ಬೈಂದೂರು ಪೊಲೀಸ್ ಠಾಣೆಯ ಸರ್ಕಾರಿ ನೌಕರರ ಮೇಲಿನ ಕೊಲೆ ಯತ್ನ ಪ್ರಕರಣವೊಂದರಲ್ಲಿ ಗಾಯಗೊಂಡಿದ್ದು, ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”