ಶಿರ್ವ ಠಾಣಾ ವ್ಯಾಪ್ತಿಯ ನಡಿಗುತ್ತು ಎಂಬಲ್ಲಿ ನಡೆದ ಘಟನೆ

ಕಾಪು: ಸೆ.19ರ ಮಟಮಟ ಮಧ್ಯಾಹ್ನ ಮೇಯಲು ಬಿಟ್ಟಿದ್ದ ಎರಡು ವರ್ಷದ ಕಪ್ಪು ಬಣ್ಣದ ದನವನ್ನು ಕಳವು ಮಾಡಿ, ಟೆಂಪೋದಲ್ಲಿ ಹಿಂಸಾತ್ಮಕವಾಗಿ ಕಟ್ಟಿ ಸಾಗಿಸಲು ಯತ್ನಿಸಿದ ಆರೋಪದ ಘಟನೆ ಕಳತ್ತೂರು ಗ್ರಾಮದ ನಡಿಗುತ್ತು ಎಂಬಲ್ಲಿ ನಡೆದಿದೆ. ಕಳತ್ತೂರು ಗ್ರಾಮದ ನಡಿಗುತ್ತುವಿನಲ್ಲಿ ದೂರುದಾರರಾದ ವಸಂತಿ ಸುನೀತಾ ಕ್ವಾಡ್ರಸ್ ಅವರು ಬೆಳಗ್ಗೆ ಮೂರು ದನಗಳನ್ನು ಕಟ್ಟಿ, ಎರಡು ದನಗಳನ್ನು ಮೇಯಲು ಬಿಟ್ಟಿದ್ದರು. ಮಧ್ಯಾಹ್ನ ಬಿಸಿಲು ಹೆಚ್ಚಾದ ಹಿನ್ನೆಲೆಯಲ್ಲಿ ಮೂರು ದನಗಳನ್ನು ನೆರಳಿನ ಸ್ಥಳದಲ್ಲಿ ಕಟ್ಟಲಾಗಿದ್ದು, ಉಳಿದ ಎರಡು ದನಗಳನ್ನು ಮೇಯಲು ಬಿಡಲಾಗಿತ್ತು.
ಸಂಜೆ ಸುಮಾರು 4 ಗಂಟೆಗೆ ದೂರುದಾರರ ಪತಿ ಲೂವೀಸ್ ಕ್ವಾಡ್ರಸ್ ಅವರು ದನಗಳನ್ನು ಮನೆಗೆ ಕರೆತರಲು ತೆರಳಿದಾಗ, ಎರಡು ದನಗಳ ಪೈಕಿ ಒಂದು ಕಪ್ಪು ಬಣ್ಣದ ಸುಮಾರು ಎರಡು ವರ್ಷದ ದನ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಈ ವಿಚಾರವನ್ನು ಪತ್ನಿಗೆ ತಿಳಿಸಿದ ಬಳಿಕ ಇಬ್ಬರೂ ಸ್ಥಳಕ್ಕೆ ತೆರಳಿ ದನಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಸ್ವಲ್ಪ ದೂರದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಟೆಂಪೋವೊಂದು ಕಂಡುಬಂದಿದೆ. ಟೆಂಪೋ ಬಳಿ ತೆರಳಿ ಪರಿಶೀಲಿಸಿದಾಗ, ಕಾಣೆಯಾಗಿದ್ದ ದನವು ಅದರೊಳಗೆ ಕಟ್ಟಿರುವುದು ಕಂಡುಬಂದಿದೆ. ಅಲ್ಲದೆ ಮತ್ತೊಂದು ದನವನ್ನು ಕೂಡ ಟೆಂಪೋದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಟೆಂಪೋ ಬಳಿ ದೂರುದಾರರಿಗೆ ಪರಿಚಯದ ಉಮ್ಮರಬ್ಬ ಸೇರಿದಂತೆ ಕೆಲವರು ಇದ್ದರು ಎನ್ನಲಾಗಿದ್ದು, ದನಗಳನ್ನು ಟೆಂಪೋದಲ್ಲಿ ಏಕೆ ಕಟ್ಟಿದ್ದೀರಿ ಎಂದು ಪ್ರಶ್ನಿಸಿದಾಗ, ಟೆಂಪೋ ಚಾಲಕ ವಾಹನವನ್ನು ಅಲ್ಲಿಂದ ಚಲಾಯಿಸಿಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಟೆಂಪೋದ ನೋಂದಣಿ ಸಂಖ್ಯೆ KA 19 85641 ಎಂದು ತಿಳಿದುಬಂದಿದೆ ಎಂದು ದೂರುದಾರರು ತಿಳಿಸಿದ್ದಾರೆ.
ಕಾಣೆಯಾಗಿದ್ದ ದನವನ್ನು ವಧೆ ಮಾಡಿ ಮಾಂಸವನ್ನಾಗಿ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಕಳ್ಳತನ ಮಾಡಿಕೊಂಡು ಹೋಗಲಾಗಿದೆ ಎಂದು ದೂರುದಾರರು ಶಂಕೆ ವ್ಯಕ್ತಪಡಿಸಿದ್ದು, ಉಮ್ಮರಬ್ಬ ಹಾಗೂ ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಾಡಹಗಲೇ ದನವನ್ನು ಕಳವು ಮಾಡಲು ಯತ್ನಿಸಿದ ಆರೋಪದ ಘಟನೆ ಬೆಳಕಿಗೆ ಬಂದ ಬಳಿಕ ಹಿಂಜಾವೇ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ದೂರುದಾರರೊಂದಿಗೆ ಶಿರ್ವ ಪೊಲೀಸ್ ಠಾಣೆಗೆ ಆಗಮಿಸಿ ದೂರು ಸಲ್ಲಿಸಿದರು. ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿ ತಡರಾತ್ರಿವರೆಗೂ ಠಾಣೆಯ ಮುಂಭಾಗದಲ್ಲಿ ಹಲವಾರು ಕಾರ್ಯಕರ್ತರು ಜಮಾಯಿಸಿದ್ದರು.
“ಇದಕ್ಕೂ ಮುನ್ನ ಸೆ.16ರ ಬೆಳಗ್ಗೆ ಬೈಂದೂರಿನ ಶಿರೂರು ಸಮೀಪ ದನ ಕಳ್ಳತನಕ್ಕೆ ಬಳಸಲಾಗಿದೆ ಎನ್ನಲಾದ ಇನ್ನೋವಾ ಕಾರೊಂದು ಪೊಲೀಸರಿಂದ ತಪ್ಪಿಸಿಕೊಂಡು ಬಂದ ಸ್ಥಿತಿಯಲ್ಲಿ ಶಿರ್ವ ಠಾಣಾ ವ್ಯಾಪ್ತಿಯ ಪೈಯ್ಯಾರು ಬಳಿ ಪತ್ತೆಯಾಗಿತ್ತು. ಇದೀಗ ಅದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಡಹಗಲೇ ದನ ಕಳವು ಮಾಡಲು ಯತ್ನಿಸಿದ ಆರೋಪದ ಘಟನೆ ನಡೆದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಘಟನೆಗಳ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ದನ ಕಳ್ಳತನ ಪ್ರಕರಣಗಳ ಹಿಂದೆ ವ್ಯವಸ್ಥಿತ ಜಾಲವಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”