ಪಡುಬಿದ್ರೆ - ಕಾರ್ಕಳ ಪೋಲಿಸರ ಕಾರ್ಯಚರಣೆ

ಉಡುಪಿ: ಡೇವಿಡ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಪರಾರಿಯಾಗಲು ಬೈಕ್ ನೀಡಿ ಸಹಕರಿಸಿದ ಲೋಕೇಶ್ ತೇಜ ಕೊಠಾರಿ (42)ಯನ್ನು ಪಡುಬಿದ್ರೆ ಹಾಗು ಕಾರ್ಕಳ ಪೋಲಿಸರು ಬಂಧಿಸಿದ್ದಾರೆ. ಈತ ಮೂಲತಃ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಹುದಾರ ಹೌಸ್, ಬಾಳಿಹಿತ್ಲು ನಿವಾಸಿಯಾಗಿದ್ದು, ಈ ಹಿಂದೆ ಬಾಂಬೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪ್ರಕರಣದ ಆರೋಪಿ ಕಿಶೋರ್ ರಾಮ ಪೂಜಾರಿಯ ಪರಿಚಯವಾಗಿ ಸ್ನೇಹ ಬೆಳೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಕೃತ್ಯದ ವೇಳೆ ನೇರವಾಗಿ ಭಾಗಿಯಾಗಿದ್ದ ಆರೋಪಿಗಳಾದ ಅನ್ಮೋಲ್ ರಸ್ತೋಗಿ ಹಾಗೂ ರಾಜು ಅವರಿಗೆ ಮೋಟಾರ್ ಸೈಕಲ್ಗಳನ್ನು ಒದಗಿಸಿ, ಇತರ ಆರೋಪಿಗಳೊಂದಿಗೆ ಸೇರಿ ಕೊಲೆ ನಡೆಸಲು ಅಪರಾಧಿಕ ಒಳಸಂಚು ರೂಪಿಸುವಲ್ಲಿ ಲೋಕೇಶ್ ಭಾಗಿಯಾಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಪತ್ತೆಗಾಗಿ ವಿಶೇಷ ಕರ್ತವ್ಯದಲ್ಲಿದ್ದ ಕಾರ್ಕಳ–ಪಡುಬಿದ್ರೆ ಪೊಲೀಸರು ಬೈಂದೂರಿನ ಯಡ್ತರೆ ಪ್ರದೇಶದಲ್ಲಿ ಲೋಕೇಶ್ನನ್ನು ವಶಕ್ಕೆ ಪಡೆದು ತನಿಖಾಧಿಕಾರಿ ಮುಂದೆ ಹಾಜರುಪಡಿಸಿದ್ದರು. ಬಳಿಕ ಆ.21ರಂದು ಆತನನ್ನು ಅಧಿಕೃತವಾಗಿ ಬಂಧಿಸಲಾಗಿದೆ. ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮೋಟಾರ್ ಸೈಕಲ್ನ ಎಂಜಿನ್ ಮತ್ತು ಚಾಸಿಸ್ ಸಂಖ್ಯೆಯನ್ನು ಉಜ್ಜಲು ಬಳಸಿದ್ದ ಮಿಷಿನ್ ಕೂಡ ಪೊಲೀಸರ ವಶವಾಗಿದೆ. ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳ ಪಾತ್ರ ಹಾಗೂ ಕೊಲೆ ಕೃತ್ಯದ ಹಿಂದಿರುವ ಸಂಪೂರ್ಣ ಸಂಚಿನ ಕುರಿತು ತನಿಖೆ ಮುಂದುವರಿದಿದೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”