ಕಾರ್ಪೊರೇಟ್ ಧಣಿಗಳ ಮುನಿಸಿನಿಂದ ಹಾರಿತೇ ಗುಂಡು?

ಉಡುಪಿ: ಜಿಟಿಜಿಟಿ ಮಳೆ ಸುರಿದು ತಣ್ಣನೆಯ ವಾತವರಣದ ನಡುವೆ ಶಾಲಾ ಮಕ್ಕಳು ಮನೆಗೆ ತೆರಳುವ ಧಾವಂತದಲ್ಲಿ ಇದ್ದರು. ಇನ್ನೇನು ಶಾಲೆ ಮಕ್ಕಳೆಲ್ಲ ಹೊರಟು ಮುದರಂಗಡಿ ಪೇಟೆಯೂ, ಗದ್ದೆಯಲ್ಲಿ ಕೋಗಿಲೆಯ ಹಿಂಡು ಬಂದು ಹೊರಟು ಹೋದಾಗ ಉಂಟಾಗುವ ವಿಲಕ್ಷಣ ಮೌನಕ್ಕೆ ಜಾರಿತ್ತು. ಅಷ್ಟರಲ್ಲೇ ಅಲ್ಲಿಗೆ ಬಂದ ಆಗಂತುಕ ರಾಜು 9 ಎಮ್ಎಮ್ ಪಿಸ್ತೂಲಿನ ಕುದುರೆಯನ್ನು ಎಳೆದ ರಭಸಕ್ಕೆ 21 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಮಾಜಿ ರೌಡಿಶೀಟರ್ ಡೇವಿಡ್ ಹೆಣವಾಗಿ ಬಿದ್ದಿದ್ದ. ಪ್ರತಿದಿನ ತನ್ನನ್ನ ಊರೆಲ್ಲಾ ಸುತ್ತಿಸುತ್ತಿದ್ದ ಬಿಳಿ ಬಣ್ಣದ ಥಾರ್ ಕಾರಿನ ಮುಂಭಾಗದಲ್ಲಿ ಡೇವಿಡ್ನ ದೇಹದ ನೆತ್ತರನ್ನು ರಾಜುವಿನ ಬಂದೂಕು ಹೊರಕ್ಕೆ ಚಿಮ್ಮಿಸಿತ್ತು. ಕೊಲೆಯಾದ್ದದ್ದು ಹಣದ ವಿಚಾರಕ್ಕೆ ಎಂಬುದು ಸ್ಪಷ್ಟವಾಗಿದೆ. ಆದರೆ ಸುಪಾರಿ ಕೊಟ್ಟವರು ಕಾರ್ಪೊರೇಟ್ ಧಣಿಗಳೇ ಎಂಬ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಗೆ ಉತ್ತರವನ್ನು ಶಿರ್ವ ಪಿಎಸ್ಐ ಮಂಜುನಾಥ್ ಮರಬದ ಹುಡುಕುತ್ತಿದ್ದಾರೆ.
ಘಟನೆ ನಡೆದ ಬಳಿಕ ಜಿಲ್ಲೆಯ ಗಡಿ ಭಾಗ ಹಾಗು ಪ್ರಮುಖ ಜಂಕ್ಷನ್ಗಳಲ್ಲಿ ನಾಕಬಂಧಿ ಹಾಕಿ ತಪಾಸಣೆ ನಡೆಸುತ್ತಿದ್ದ ಪೋಲಿಸರು ಬಸ್ಗಳನ್ನು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಉತ್ತರಕನ್ನಡ ಜಿಲ್ಲೆಗೆ ತೆರಳುತ್ತಿದ್ದ ಬಸ್ ಅನ್ನು ತಪಾಸಣೆ ನಡೆಸುತ್ತಿದ್ದಾಗ ಉತ್ತರಪ್ರದೇಶದ ಆರೋಪಿ ರಾಜು (42) ಪತ್ತೆಯಾಗಿದ್ದಾನೆ.
ಉಡುಪಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗು ಪೋಲಿಸರಿಗೆ ಸವಾಲಾಗಿದ್ದ ಶೂಟೌಟ್ ಪ್ರಕರಣವನ್ನು ಭೇದಿಸಲು ಬೈಂದೂರು ಠಾಣೆಯ ಪಿಎಸ್ಐ - 2 ಮಹೇಶ್ ಅವರ ಕಾರ್ಯವನ್ನು ಜಿಲ್ಲೆಯ ಜನತೆ ಶ್ಲಾಘಿಸಿದ್ದಾರೆ. ಬಸ್ಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಸಿಸಿಟಿವಿಯ ಅಸ್ಪಷ್ಟ ಮುಖದ ವಿಡಿಯೋವನ್ನು ಆಧರಿಸಿ ಆರೋಪಿಯನ್ನು ಗುರುತಿಸಿ, ಪ್ರಕರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಒಂದೇ ಬಸ್ನಲ್ಲಿ ಮೂವರು ಆರೋಪಿಗಳು ಪ್ರತ್ಯೇಕವಾದ ಸೀಟ್ನಲ್ಲಿ ಕುಳಿತಿದ್ದರು. ರಾಜುವನ್ನು ಪೋಲಿಸರು ಗುರುತಿಸುತ್ತಿದ್ದಂತೆ, ಉಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ನಂತರ ಭಟ್ಕಳ ಪೋಲಿಸರ ಸಹಕಾರದೊಂದಿಗೆ ಬಿಹಾರದ ಜಿಯಾವುಲ್ ವಜೂಲ್ ಶೇಖ್ (38) ಹಾಗು ಕುಮುಟಾ ಪೋಲಿಸರ ಸಹಕಾರದೊಂದಿಗೆ ಉತ್ತರಕಾಂಡದ ಅಜಯ್ ರಸ್ತೋಗಿ ಅಲಿಯಾಸ್ ಅನ್ಮೋಲ್ (23)ನನ್ನು ಬಂಧಿಸಿದ್ದಾರೆ.
ತನ್ನ ಠಾಣಾ ವ್ಯಾಪ್ತಿಯಲ್ಲಿ ಹಾಡಹಗಲೇ ನಡೆದ ಕುಕೃತ್ಯದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಶಿರ್ವ ಪಿಎಸ್ಐ ಮಂಜುನಾಥ್ ಮರಬದ ಅವರ ಕಾರ್ಯ ವಿಶೇಷವಾಗಿತ್ತು. ಸ್ಥಳದಲ್ಲಿ ಕ್ರೈಂ ಸೀನ್ ಅನ್ನು ಮಳೆಯ ನಡುವೆಯೂ ರಕ್ಷಿಸಿ, ಸಾಕ್ಷ್ಯ ಕಲೆ ಹಾಕುವುದರ ಜೊತೆಗೆ ಆರೋಪಿಗಳನ್ನು ಪತ್ತೆಹಚ್ಚುವ ಸವಾಲು ಅವರದ್ದಾಗಿತ್ತು. ಕೃತ್ಯ ಬಳಸಿದ ಬೈಕ್ ಹಾಗು ಸ್ಥಳದ ಸಿಸಿಟಿವಿಯನ್ನು ಆಧರಿಸಿ, ಇತರ ಠಾಣೆಯ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ, ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಯುಪಿಸಿಎಲ್ ಅದಾನಿಯಲ್ಲಿ 2 ಚಿಮುಣಿ ನಿರ್ಮಾಣದ ಗುತ್ತಿಗೆಯಲ್ಲಿ ಖಾಸಗಿ ಸಂಸ್ಥೆ ವಹಿಸಿಕೊಂಡಿದೆ. ಆ ಸಂಸ್ಥೆಯ ₹ 500 ಕೋಟಿಯ ಟೆಂಡರ್ ಅನ್ನು ಅಂಧ್ರಪ್ರದೇಶ ಮೂಲದ ಸಂಸ್ಥೆಗೆ ಸಬ್ಟೆಂಡರ್ ಆಗಿ ನೀಡಿದೆ. ಈ ಆಂಧ್ರಮೂಲದ ಸಂಸ್ಥೆಗೆ ಸಿವಿಲ್ ಕೆಲಸಗಳನ್ನು ಡೇವಿಡ್ ಮಾಡುತ್ತಿದ್ದನು. ಮಾಡಿದ ಕೆಲಸ ಹಣ ಪಾವತಿಯಾಗದೇ ಕಾರಣ ಸಂಸ್ಥೆಯ ಉಪಕರಣಗಳನ್ನು ಡೇವಿಡ್ ವಶಕ್ಕೆ ಪಡೆದಿದ್ದ. ಜೊತೆಗೆ ಮುಖ್ಯ ಕಂಪೆನಿಯೊಂದಿಗೆ ಮಾತನಾಡಿ, ಆಂಧ್ರಪ್ರದೇಶದ ಕಂಪೆನಿಯ ಗುತ್ತಿಗೆಯನ್ನು ರದ್ದು ಪಡಿಸಿದ್ದನು ಎಂಬ ಮಾಹಿತಿ ಇದೆ. ಈ ಬಗ್ಗೆ ತನಿಖೆಯಿಂದಷ್ಟೇ ಸ್ಪಷ್ಟತೆ ಸಿಗಲಿದೆ.
ಮೂವರು ಆರೋಪಿಗಳಿಗೆ ಇಬ್ಬರಿಗೊಬ್ಬರು ಪರಿಚಯವಿಲ್ಲ. ಮೂಲಗಳ ಪ್ರಕಾರ ನಾಲ್ಕು ತಿಂಗಳಿನಿಂದ ಆರೋಪಿಗಳು ಮುದರಂಗಡಿ ಪರಿಸರದಲ್ಲಿ ಬೀಡು ಬಿಟ್ಟಿದ್ದಾರೆ. ಎರಡು ದಿನದ ಹಿಂದೆಯಷ್ಟೇ ಶೂಟರ್ ರಾಜುವಿನ ಡೇವಿಡ್ನ ಪೋಟೊವನ್ನು ಒದಗಿಸಲಾಗಿತ್ತು. ಅಲ್ಲದೇ ಕೊಲೆಯಾದ ಬಳಿಕ ಆತನ ಖಾತೆಗೆ ಸ್ಥಳೀಯ ವ್ಯಕ್ತಿಯೊಬ್ಬರು ಗೂಗಲ್ ಪೇ ಮೂಲಕ ₹ 50 ಸಾವಿರ ಪಾವತಿಸಿದ್ದಾರೆ ಎಂದು ನಂಬಲು ಅರ್ಹವಾದ ಮೂಲಗಳು ತಿಳಿಸಿದೆ.
“ಡೇವಿಡ್ ಹತ್ಯೆಯ ಹಿಂದೆ ‘ದೊಡ್ಡ ಕೈ’ ಇದೆಯೇ? ಮಾಜಿ ರೌಡಿಶೀಟರ್ ಡೇವಿಡ್ ಹತ್ಯೆ ಪ್ರಕರಣದಲ್ಲಿ ಮೂವರು ಶೂಟರ್ಗಳು ಪೊಲೀಸರ ಕೈಗೆ ಸಿಕ್ಕಿದ್ದಾರೆ. ಆದರೆ ಪ್ರಕರಣದ ಅಸಲಿ ರಹಸ್ಯ ಇನ್ನೂ ಬಾಕಿಯಿದೆ. ಶೂಟರ್ಗಳನ್ನು ಕಳುಹಿಸಿದವರು ಯಾರು? ಡೇವಿಡ್ನ ಫೋಟೋ ನೀಡಿದವರು ಯಾರು? ₹50 ಸಾವಿರ ಹಣ ವರ್ಗಾವಣೆ ಮಾಡಿದವರು ಯಾರು? ₹500 ಕೋಟಿ ಟೆಂಡರ್ಗೂ ಹತ್ಯೆಗೂ ಸಂಬಂಧವಿದೆಯೇ? ಸುಪಾರಿ ಕೊಟ್ಟವರು ಕಾರ್ಪೊರೇಟ್ ಧಣಿಗಳೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಮುದರಂಗಡಿ ಶೂಟೌಟ್ ಪ್ರಕರಣದಲ್ಲಿ ಗುಂಡು ಹಾರಿಸಿದವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆದರೆ ಗುಂಡು ಹಾರಿಸಲು ಹೇಳಿದ ‘ಕೈ’ ಇನ್ನೂ ತನಿಖೆಯ ನೆರಳಲ್ಲಿದೆ.”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”