ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಉಡುಪಿ: ಅಣಕು ಯುವಸಂಸತ್ತು ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಗೆಲುವು ಸಾಧಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಜಿಲ್ಲಾಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ, ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಕಾಲೇಜಿಗೆ ಕೀರ್ತಿ ತರಬೇಕು ಎಂದು ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ.ಸುರೇಖಾ ಶುಭ ಹಾರೈಸಿದರು. ಅವರು ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ, ಕಾರ್ಕಳ ಮತ್ತು ಉಡುಪಿ ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ, ಕಾನೂನು ಇಲಾಖೆ, ತಾಲೂಕು ಪಂಚಾಯತ್ ವತಿಯಿಂದ ನಡೆದ ಯುವ ಸಂಸತ್ತು ಸ್ಪರ್ಧೆಯಲ್ಲಿ ವಿಜೇತರಾಗಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು
ಅಣಕು ಯುವಸಂಸತ್ತು ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳು, ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿಗಳನ್ನು ಅರಿತುಕೊಳ್ಳಲು ಉತ್ತಮ ವೇದಿಕೆಯಾಗಿದೆ. ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ವಾಕ್ಚಾತುರ್ಯ, ವಿಷಯ ಮಂಡನೆಯ ಕೌಶಲ, ತಾರ್ಕಿಕ ಚಿಂತನೆ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಪ್ರಸ್ತುತ ಸಾಮಾಜಿಕ ಹಾಗೂ ರಾಜಕೀಯ ವಿಚಾರಗಳನ್ನು ಅರ್ಥಮಾಡಿಕೊಳ್ಳುವುದರ ಜತೆಗೆ, ಸಂವಿಧಾನಬದ್ಧವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಸಾಮರ್ಥ್ಯವೂ ಬೆಳೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಸಾಧನೆ ಮಾಡಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುವುದು ವಿದ್ಯಾರ್ಥಿಗಳ ಪರಿಶ್ರಮ, ಆಸಕ್ತಿ ಮತ್ತು ಸಿದ್ಧತೆಗೆ ಸಂದ ಗೌರವವಾಗಿದೆ. ಈ ಸಾಧನೆಯಿಂದ ಮತ್ತಷ್ಟು ಪ್ರೇರಣೆ ಪಡೆದು, ಜಿಲ್ಲಾಮಟ್ಟದ ಸ್ಪರ್ಧೆಗೆ ಉತ್ತಮ ತಯಾರಿ ನಡೆಸಬೇಕು. ಸ್ಪರ್ಧೆಯಲ್ಲಿ ಶಿಸ್ತು, ಸಮಯಪ್ರಜ್ಞೆ, ವಿಷಯದ ಆಳವಾದ ಅಧ್ಯಯನ ಹಾಗೂ ಪರಿಣಾಮಕಾರಿ ಮಾತುಗಾರಿಕೆಗೆ ಆದ್ಯತೆ ನೀಡಬೇಕು ಎಂದರು.
ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಜಿಲ್ಲಾಮಟ್ಟದಲ್ಲಿಯೂ ಗೆಲುವು ಸಾಧಿಸಿ, ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಬೇಕು. ಆ ಮೂಲಕ ಕಾಲೇಜಿನ ಗೌರವವನ್ನು ಹೆಚ್ಚಿಸುವ ಜತೆಗೆ ಇತರ ವಿದ್ಯಾರ್ಥಿಗಳಿಗೂ ಮಾದರಿಯಾಗಬೇಕು ಅವರು ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಡಾ.ಪ್ರೀತಿ ಹರೀಶ್ರಾಜ್, ಪ್ರಾಧ್ಯಾಪಕರಾದ ಡಾ.ನವೀನ್ಚಂದ್ರ, ಡಾ.ಜಯಮೋಲ್ ಪಿಎಸ್ ಉಪಸ್ಥಿತರಿದ್ದರು.
“ಕಾರ್ಕಳ ಹಾಗು ಉಡುಪಿ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಮಾತುಗಾರರಾಗಿ ವಿದ್ಯಾರ್ಥಿಗಳಾದ ದೀಪಕ್ ಕಾಮತ್ ಎಳ್ಳಾರೆ, ಸುಮಂತ್, ಲಕ್ಷ್ಮೀಕಾಂತ್, ವಸುದೇವ ತಿಲಕ್, ಗಣೇಶ್ ಶ್ಯಾನುಭಾಗ್, ವಿನ್ಯಾಸ್ ಪೈ, ಗಣೇಶ್ ಭಟ್ಟ ಅವರು ಪ್ರಶಸ್ತಿ ಪಡೆದರು. ”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”