ಜನತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ

ಕಿರಿಮಂಜೇಶ್ವರ: ಇಲ್ಲಿನ ಜನತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಮಾತೃವಂದನ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು. ವಾಗ್ಮಿ ದಾಮೋದರ ಶರ್ಮ ಕಾರ್ಯಕ್ರಮವನ್ನು ಉದ್ಘಾಟಿಸಿ, "ಸಮುದ್ರಕ್ಕೆ ಹೋದ ನಾವಿಕ, ಯುದ್ಧಕ್ಕೆ ಹೋದ ಸೈನಿಕ, ಹೆರಿಗೆಗೆ ಹೋದ ತಾಯಿ ಮರಳಿ ಬರುವರೆನ್ನುವ ಖಾತ್ರಿ ಇರುವುದಿಲ್ಲ. ಅವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಟವನ್ನು ಮಾಡಿರುತ್ತಾರೆ. ವಿದ್ಯಾರ್ಥಿಗಳು ಸಾಧನೆಯನ್ನು ಮಾಡಿದಾಗ ಅವರನ್ನು ಅಭಿನಂದಿಸಬೇಕೆಂದರು. ಹಾಗೆಯೇ ತಂದೆತಾಯಿಯ ತ್ಯಾಗಕ್ಕೆ ಗೌರವವನ್ನು ನೀಡುವ ಸಲುವಾಗಿ ಮಾತೃವಂದನೆಯನ್ನು ವಿಧಿವತ್ತಾಗಿ ಮಾಡಿಸಿದರು. ಜನತಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಣ ಮಾರ್ಗದರ್ಶಕರಾಗಿರುವ ಅಭಿಲಾಷ್ ಕ್ಷತ್ರಿಯ ಅವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ "ತಂದೆ ತಾಯಿ ಮಕ್ಕಳಿಗೆ ಮೊದಲು ಗುರುವಾಗಿದ್ದು,ಮಕ್ಕಳ ಯಶಸ್ಸಿನಲ್ಲಿ ಹೆತ್ತವರ ತ್ಯಾಗ, ಪ್ರೀತಿ ಇದ್ದಿರುತ್ತದೆ. ಅಂತಹ ದೈವೀಸ್ವರೂಪರಾದ ತಂದೆ ತಾಯಿಯನ್ನು ಗೌರವಿಸುವುದು ಪ್ರತಿ ಮಗುವಿನ ಆದ್ಯ ಕರ್ತವ್ಯ ಎಂದರು. ಸಮರ್ಪಣ ಎಜ್ಯುಕೇಶನಲ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಜನತಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ ಮೊಗವೀರ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ "ಹುಟ್ಟಿನಿಂದ ಯಾವ ಮಕ್ಕಳು ದಡ್ಡರಾಗಿರುವುದಿಲ್ಲ, ಸತತ ಪ್ರಯತ್ನದ ಮೂಲಕ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಕಠಿಣ ಪರಿಶ್ರಮದ ಮೂಲಕ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಏರಬೇಕು" ಎಂದರು. ಸಮರ್ಪಣಾ ಎಜ್ಯುಕೇಶನಲ್ ಟ್ರಸ್ಟ್ ಹಾಗೂ ಜನತಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿಯಾಗಿರುವ ಶ್ಯಾಮಲಾ ಗಣೇಶ್, ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಉದಯ್ ನಾಯಕ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಹಾಗೂ ಸಂಯೋಜಕ ಸುಬ್ರಹ್ಮಣ್ಯ ಮರಾಟಿ ಸ್ವಾಗತಿಸಿ, ಸಹಶಿಕ್ಷಕಿಯರಾಗಿರುವ ದಿವ್ಯ ಪ್ರಭು ವಂದಿಸಿ, ಸಹಶಿಕ್ಷಕರಾದ ಮಹಾದೇವ ನಿರೂಪಿಸಿದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”