ಪತ್ರಿಕಾ ಪ್ರಕಟಣೆಯ ಮೂಲಕ ಖಂಡನೆ

ಉಡುಪಿ: ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕರಾದ ನರಸಿಂಹ ಮಾಣಿ ಅವರಿಗೆ ಪೊಲೀಸ್ ಇಲಾಖೆಯು ಗಡಿಪಾರು ನೋಟಿಸ್ ನೀಡಿರುವುದನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದ್ದು, ಪೊಲೀಸ್ ಇಲಾಖೆಯ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಹಿಂದೂ ಜಾಗರಣ ವೇದಿಕೆಯ ಉಡುಪಿ ಜಿಲ್ಲಾ ಸಂಯೋಜಕ ರಾಜೇಶ್ ಉಚ್ಚಿಲ, ಇಲಾಖೆಯ ದ್ವೇಷಪೂರಿತ ನಡವಳಿಕೆಯನ್ನು ಖಂಡಿಸಿ ಕಠಿಣ ಎಚ್ಚರಿಕೆ ನೀಡಿದ್ದಾರೆ. ಶಾಂತಿಯುತ ವಾತಾವರಣ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರ ಹಾಗೂ ಕಾರ್ಯಕರ್ತರ ಧ್ವನಿಯನ್ನು ಅಡಗಿಸಲು ಇಲಾಖೆ ದಬ್ಬಾಳಿಕೆ ನಡೆಸುತ್ತಿದೆ. ಏಕಪಕ್ಷೀಯ ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಂಡು ಜಿಲ್ಲೆಯನ್ನು ತಕ್ಷಣವೇ ಪೊಲೀಸ್ ರಾಜ್ಯವನ್ನಾಗಿ ಪರಿವರ್ತಿಸಲು ಹೊರಟಿರುವ ಇಲಾಖೆಯ ಈ ಕ್ರಮವನ್ನು ಸಂಘಟನೆಯು ಎಂದಿಗೂ ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಹಿಂದೂ ಕಾರ್ಯಕರ್ತರನ್ನೇ ಉದ್ದೇಶಪೂರ್ವಕವಾಗಿ ಗುರಿಮಾಡಿಕೊಂಡು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ. ಇದೀಗ ಜಿಲ್ಲಾ ಸಂಯೋಜಕ ನರಸಿಂಹ ಮಾಣಿಯವರಿಗೆ ಗಡಿಪಾರು ನೋಟಿಸ್ ನೀಡಿರುವುದು ಇಲಾಖೆಯ ಪೂರ್ವಾಗ್ರಹ ಪೀಡಿತ ನಡವಳಿಕೆಗೆ ಸಾಕ್ಷಿಯಾಗಿದೆ. ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಪೊಲೀಸ್ ಇಲಾಖೆಯೇ ನೇರ ಮತ್ತು ಸಂಪೂರ್ಣ ಹೊಣೆಯಾಗಲಿದೆ. ತನ್ನ ನಡವಳಿಕೆಯನ್ನು ತಕ್ಷಣವೇ ತಿದ್ದುಕೊಳ್ಳಬೇಕು. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ತಲೆದೋರುವ ಯಾವುದೇ ಅಹಿತಕರ ಘಟನೆಗಳಿಗೆ ಪೊಲೀಸ್ ಇಲಾಖೆಯೇ ನೇರ ಹೊಣೆ ಹೊರಬೇಕಾಗಲಿದೆ. ತಕ್ಷಣವೇ ನರಸಿಂಹ ಮಾಣಿ ಅವರ ಮೇಲಿನ ಗಡಿಪಾರು ನೋಟಿಸ್ ಅನ್ನು ಹಿಂಪಡೆಯಬೇಕು ಎಂದು ರಾಜೇಶ್ ಉಚ್ಚಿಲ ಆಗ್ರಹಿಸಿದ್ದಾರೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”