ಉಡುಪಿ ಟ್ರಾಫಿಕ್ ಪೋಲಿಸರ ಮಿಂಚಿನ ಕಾರ್ಯಾಚರಣೆ

ಉಡುಪಿ: ಅಮಲು. ಈ ಅಮಲೆಂಬುದೇ ವಿಚಿತ್ರ. ಇದನ್ನು ಝೆನ್ Z ಗಳು ಕಿಕ್ ಎನ್ನುತ್ತಾರೆ. ಧೂಮಪಾನ, ಮದ್ಯಪಾನ, ಗಾಂಜಾ ಸೇವನೆಯಿಂದ ಅಮಲು ಏರುತ್ತದೆ. ಹೀಗೆ ಏರಿದ ಅಮಲು ನೂರಾರು ಜೀವಗಳನ್ನು ಬಲಿ ಪಡೆದಿದೆ. ಪಡೆಯುತ್ತಲೇ ಇದೆ. ಬೈಕ್ ಸವಾರನಿಂದ ಬಸ್ ಚಾಲಕನವರೆಗೆ ಇದ್ದ ಅಮಲು ಈಗ ವಿಮಾನದ ಪೈಲೆಟ್ ಅನ್ನು ಬಿಟ್ಟಿಲ್ಲ...! 2026 ಆಗಸ್ಟ್ 6 ರಂದು ಬೆಳಗ್ಗೆ 8.27 ಕ್ಕೆ ಫುಕೆಟ್ನಿಂದ (ಥೈಲ್ಯಾಂಡ್) ನವದೆಹಲಿಗೆ ಹೊರಟಿದ್ದ ವಿಮಾನದಲ್ಲಿ 137 ಪ್ರಯಾಣಿಕರು ಮತ್ತು 8 ಸಿಬ್ಬಂದಿ ಇದ್ದರು. ಆಕಾಶದಲ್ಲೇ ವಿಮಾನ ಕುಸಿದ ಪರಿಣಾಮವಾಗಿ 24 ಜನರು ತೀವ್ರವಾಗಿ ಗಾಯಗೊಂಡಿದ್ದರು. ತನಿಖೆಯಲ್ಲಿ ಪೈಲೆಟ್ ಗಾಂಜಾ ಸೇವಿಸಿರುವುದು ದೃಢಪಟ್ಟಿತ್ತು. ಅಕಾಶದಲ್ಲಿ ಹಕ್ಕಿಗಳಂತೆ ಹಾರುವ ಪೈಲೆಟ್ಗಳೇ ಅಮೇರಿಸಿರುವಾಗ, ಬಸ್ ಚಾಲಕರು...? ಅವರು ಇದರಿಂದ ಹೊರತಾಗಿಲ್ಲ. “ಆಜ್ ಕಿ ರಾತ್ ಕೋಯಿ ಆನೆ ಕೋ… ಹೈ ರೇ ಬಾಬಾ ರೇ ಬಾಬಾ… ಇಂತ್ಜಾರ್ ಔರ್ ಥೋಡಾ ಸಾ ಇಂತ್ಜಾರ್…” ಹೀಗೆ ಹಾಡನ್ನು ಗುಣುಗುತ್ತಾ, ಹನಿ ಹನಿ ಮಳೆಯ ನಡುವೆ 90 ಏರಿಸಿಕೊಂಡು ಸ್ಟೀರಿಂಗ್ ಹಿಡಿದಿದ್ದ ಚಾಲಕರಿಗಾಗಿ ಉಡುಪಿ ಟ್ರಾಫಿಕ್ ಪೊಲೀಸರು ರಾತ್ರಿ ಇಂತ್ಜಾರ್ ಮಾಡುತ್ತಿದ್ದರು..! ಯಾರದ್ದೋ ಅಕ್ಕ, ಅಣ್ಣ, ಅಪ್ಪ, ಅಮ್ಮ, ತಂಗಿ, ಸಹೋದರ… ತಮ್ಮ ಜೀವವನ್ನು ನಂಬಿ ಟಿಕೆಟ್ ಕಾಯ್ದಿರಿಸಿ ಸ್ಲೀಪರ್ ಬಸ್ ಏರಿದ್ದರು. ಆದರೆ ಚಾಲಕನ ಒಂದು ಸಣ್ಣ ನಿರ್ಲಕ್ಷ್ಯವೇ ಇಡೀ ಬಸ್ಸನ್ನು ಚಲಿಸುವ ಶವಪೆಟ್ಟಿಗೆಯನ್ನಾಗಿ ಮಾಡಬಲ್ಲದು! ಈ ಅಪಾಯವನ್ನು ಗಂಭೀರವಾಗಿ ಪರಿಗಣಿಸಿದ ಟ್ರಾಫಿಕ್ ಪಿಎಸ್ಐ ಮಹೇಶ್ ಹಾಗೂ ತಂಡ ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿತು. ಮದ್ಯ ಸೇವಿಸಿ ಬಸ್ ಚಲಾಯಿಸುತ್ತಿದ್ದ ಚಾಲಕರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲಾಯಿತು.
ಸ್ನೇಹಿತರು, ಕುಟುಂಬಸ್ಥರು ಅಥವಾ ಪರಿಚಯಸ್ಥರು ವಾಹನ ಚಲಾಯಿಸುತ್ತಿದ್ದರೆ, “ನಿಧಾನವಾಗಿ ಹೋಗು… ಜೋಪಾನವಾಗಿ ಓಡಿಸು” ಎಂದು ಹೇಳುತ್ತೇವೆ. ಆದರೆ ಬಸ್ಗಳಲ್ಲಿ..? ಚಾಲಕ ಹೇಗೆ ಓಡಿಸುತ್ತಿದ್ದಾನೆ..? ಆತ ಮದ್ಯ ಸೇವಿಸಿದ್ದಾನೆಯೇ..? ಎಂಬುದನ್ನು ಪ್ರಯಾಣಿಕರು ಸಾಮಾನ್ಯವಾಗಿ ಪ್ರಶ್ನಿಸುವುದಿಲ್ಲ. ಕಾರಣ ಒಂದೇ—ಮನೆಯಲ್ಲಿ ಕಾಯುತ್ತಿರುವ ಅಪ್ಪ, ಅಮ್ಮ, ಹೆಂಡತಿ, ಮಕ್ಕಳು ನೆನಪಿನಲ್ಲಿಟ್ಟುಕೊಂಡು, “ಡ್ರೈವರಣ್ಣ ಜೋಪಾನವಾಗಿ ನಮ್ಮನ್ನು ದಡ ಮುಟ್ಟಿಸುತ್ತಾನೆ” ಎಂಬ ನಂಬಿಕೆ. ಆ ನಂಬಿಕೆಯ ಮೇಲೆಯೇ ಸಾವಿರಾರು ಬಸ್ಗಳು ಪ್ರತಿದಿನ ರಸ್ತೆಯಲ್ಲಿ ಓಡುತ್ತಿವೆ. ಅದೇ ನಂಬಿಕೆಯಿಂದ ಚಾಲಕರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಾರೋ ಒಬ್ಬರು, ಇಬ್ಬರು ಚಾಲಕರು ಮಾಡುವ ತಪ್ಪುಗಳು ಎಲ್ಲ ಚಾಲಕರಿಗೂ ಕಪ್ಪುಚುಕ್ಕೆಯಾಗಬಾರದು. ಆದರೆ ಸ್ಟೀರಿಂಗ್ ಕೈಗೆ ಬಂದ ಕ್ಷಣ, ಚಾಲಕನ ಹೊಣೆಗಾರಿಕೆ ನೂರಾರು ಜೀವಗಳದ್ದಾಗಿರುತ್ತದೆ.
ನಗರದ ಕಲ್ಪನಾ ಜಂಕ್ಷನ್, ಕಿನ್ನಿಮೂಲ್ಕಿ ಸೇರಿದಂತೆ ಹಲವು ಜಂಕ್ಷನ್ಗಳಲ್ಲಿ ರಾತ್ರಿ 8 ಗಂಟೆಯಿಂದ ತಡರಾತ್ರಿವರೆಗೆ ಸರ್ಕಾರಿ ಹಾಗೂ ಖಾಸಗಿ ಸ್ಲೀಪರ್ ಬಸ್ಗಳ ಚಾಲಕರನ್ನು ಪೊಲೀಸರು ತಪಾಸಣೆಗೆ ಒಳಪಡಿಸಿದರು. ಬೆಂಗಳೂರು, ಮೈಸೂರು ಸೇರಿದಂತೆ ದೂರದ ಊರುಗಳಿಗೆ ತೆರಳುವ ರಾತ್ರಿ ಬಸ್ಗಳ ಚಾಲಕರು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದಾರೆ ಎಂಬ ಮಾಹಿತಿಯ ಆಧಾರದಲ್ಲಿ ಈ ವಿಶೇಷ ತಪಾಸಣೆ ನಡೆಸಲಾಯಿತು.
ತಪಾಸಣೆ ವೇಳೆ ಏಳು ಬಸ್ಗಳ ಚಾಲಕರು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿರುವುದು ಪತ್ತೆಯಾಯಿತು. ತಕ್ಷಣ ಅವರನ್ನು ಸ್ಟೀರಿಂಗ್ನಿಂದ ಕೆಳಗಿಳಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಯಿತು. ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಿ ಪ್ರಯಾಣಕ್ಕೆ ಸಿದ್ಧರಾಗಿದ್ದರು. ಹೀಗಾಗಿ ಅವರ ಪ್ರಯಾಣಕ್ಕೆ ತೊಂದರೆಯಾಗದಂತೆ ಪೊಲೀಸರು ಮುತುವರ್ಜಿ ವಹಿಸಿದರು. ಮದ್ಯ ಸೇವಿಸಿದ್ದ ಚಾಲಕರ ವಿಚಾರವನ್ನು ಬಸ್ಗಳ ಮ್ಯಾನೇಜರ್ ಹಾಗೂ ಮಾಲೀಕರ ಗಮನಕ್ಕೆ ತರಲಾಯಿತು. ಬಳಿಕ ಬದಲಿ ಚಾಲಕರ ವ್ಯವಸ್ಥೆ ಮಾಡಿದ ನಂತರವೇ ಬಸ್ಗಳಿಗೆ ಪ್ರಯಾಣ ಮುಂದುವರಿಸಲು ಅವಕಾಶ ನೀಡಲಾಯಿತು.
ದೂರದ ಊರುಗಳಿಗೆ ತೆರಳುವ ರಾತ್ರಿ ಸ್ಲೀಪರ್ ಬಸ್ಗಳಿಗೆ ಚಾರ್ಮಾಡಿ, ಶಿರಾಡಿ, ಹುಲಿಕಲ್ ಸೇರಿದಂತೆ ಅಪಾಯಕಾರಿ ಘಾಟಿ ಮಾರ್ಗಗಳು ಎದುರಾಗುತ್ತವೆ. ಅಂತಹ ರಸ್ತೆಯಲ್ಲಿ ಚಾಲಕನ ತಲೆಯಲ್ಲಿ ಮತ್ತಿನ ನಶೆ ಇದ್ದರೆ ಸಾಕು. ಒಂದು ಸಣ್ಣ ಎಡವಟ್ಟು ನೂರಾರು ಅಮೂಲ್ಯ ಜೀವಗಳಿಗೆ ಕುತ್ತು ತರಬಹುದು. ಪ್ರಯಾಣಿಕರು ಸ್ಲೀಪರ್ನಲ್ಲಿ ನಿದ್ರೆಯಲ್ಲಿರುವಾಗ ಚಾಲಕನ ಕಣ್ಣಿಗೆ ನಿದ್ದೆ, ತಲೆಗೆ ನಶೆ… ಇದು ಪ್ರಯಾಣವಲ್ಲ; ಜೀವಗಳೊಂದಿಗೆ ನಡೆಯುವ ಜೂಜಾಟ.! ಆ ಜೂಜಾಟಕ್ಕೆ ಉಡುಪಿ ಟ್ರಾಫಿಕ್ ಪೊಲೀಸರು ರಾತ್ರಿ ಬ್ರೇಕ್ ಹಾಕಿದ್ದಾರೆ.
“ಪೆಗ್ ಏರಿದ್ದರೆ ಸ್ಟೀರಿಂಗ್ ಹಿಡಿಯಬಾರದು. ಸ್ಟೀರಿಂಗ್ ಹಿಡಿದಿದ್ದರೆ—ನಶೆ ಇರಬಾರದು.”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”