ಯಕ್ಷಗಾನ ಕಲಾರಂಗ ಸರಕಾರ ಮಾಡುವ ಕೆಲಸವನ್ನು ಮಾಡುತ್ತಿದೆ - ಶಾಸಕ ಕಿರಣ್ ಕೊಡ್ಗಿ

ಉಡುಪಿ: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸೃಜನ್ ಎಸ್. (SSLC ಯಲ್ಲಿ 87.36%, ರಮ್ಯಾ ಮತ್ತು ಸತೀಶ್ ಭಂಡಾರಿ ಇವರ ಪುತ್ರ) ಇವರಿಗೆ ಹೆಬ್ರಿ ತಾಲೂಕಿನ ಆರ್ಡಿಯಲ್ಲಿ ಕನ್ನರ್ಪಾಡಿಯ ಡಾ.ಪಿ.ಆರ್. ರಾಜಗೋಪಾಲ ಮತ್ತು ಪಿ. ಆರ್. ರಮೇಶ್ ಇವರು ತಮ್ಮ ಮಾತಾ-ಪಿತೃಗಳಾದ ಪಿ. ರಾಘವೇಂದ್ರ ತಂತ್ರಿ ಮತ್ತು ಯಶೋದಾ ಆರ್. ತಂತ್ರಿ ಇವರ ಸ್ಮರಣೆಯಲ್ಲಿ ನಿರ್ಮಿಸಿದ ನೂತನ ಮನೆ 'ಯಶೋರಾಗ' ಸೋಮವಾರ ಉದ್ಘಾಟನೆಗೊಂಡಿತು. ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿ, ಯಕ್ಷಗಾನ ಕಲಾರಂಗ ಸರಕಾರ ಮಾಡುವ ಕೆಲಸವನ್ನು ಮಾಡುತ್ತಿದೆ. ಅವರ ಪಾರದರ್ಶಕ ವ್ಯವಹಾರ ಮತ್ತು ಬದ್ಧತೆಯಿಂದ ಕೂಡಿದ ಕೆಲಸಕ್ಕೆ ಸಾಮಾಜಿಕವಾಗಿಯೂ ವಿಶೇಷ ಪ್ರೋತ್ಸಾಹ ಸಿಗುತ್ತಿದೆ. ಈ ಸಂಸ್ಥೆಯ ಕಾರ್ಯಕ್ರಮದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶವಿರುತ್ತದೆ. ಇದರಲ್ಲಿ ಭಾಗವಹಿಸುವುದು ನನಗೆ ಅತ್ಯಂತ ಸಂತೋಷದ ವಿಷಯವಾಗಿದೆ ಎಂದರು. ಪ್ರಾಯೋಜಕತ್ವ ವಹಿಸಿದ ಡಾ. ಪಿ. ಆರ್. ರಾಜಗೋಪಾಲ ಮತ್ತು ರಮೇಶ್ ಪಿ. ಆರ್. ಸಹೋದರರು ಮಾತನಾಡಿ, ಬಾಲ್ಯದ ಬಡತನವನ್ನು ನೆನಪಿಸಿಕೊಂಡು ನಮ್ಮ ತಂದೆ-ತಾಯಂದಿರು ಕಷ್ಟದ ನಡುವೆಯೂ ನಮಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ನಮ್ಮ ಸಾಧನೆಗೆ ಕಾರಣರಾಗಿದ್ದಾರೆ. ಅವರ ಸ್ಮೃತಿಯಲ್ಲಿ ಈ ಮನೆಯನ್ನು ನಿರ್ಮಿಸಿಕೊಟ್ಟು ಧನ್ಯರಾದೆವು. ಈ ಅವಕಾಶವನ್ನು ಕಲ್ಪಿಸಿದ ಸಂಸ್ಥೆಗೆ ನಾವು ಋಣಿಗಳಾಗಿದ್ದೇವೆ. ನಮ್ಮ ಬಾಲ್ಯದ ಒಡನಾಡಿಯಾಗಿದ್ದ ಎಂ. ಗಂಗಾಧರ್ ರಾವ್ ತಮ್ಮ ತಂಡದೊಂದಿಗೆ ಸಾಮಾಜಿಕವಾಗಿ ಮಾಡುವ ಕೆಲಸದ ಬಗ್ಗೆ ಕೇಳಿದ್ದೆವು ಇವತ್ತು ಅದರ ಪ್ರತ್ಯಕ್ಷ ದರ್ಶನವಾಯಿತು ಎಂದರು. ಸಂಸ್ಥೆಯ ಕೋಶಾಧಿಕಾರಿ, ನಿವೃತ್ತ ಪ್ರಾಂಶುಪಾಲ ಪ್ರೊ.ಕೆ. ಸದಾಶಿವ ರಾವ್ 'ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಮ್' ಎಂಬ ಶ್ಲೋಕವನ್ನುದ್ಧರಿಸಿ ಯಕ್ಷಗಾನ ಕಲಾರಂಗ ಇದರಂತೆ ನಡೆಯುತ್ತಿದೆ. ಅದಕ್ಕೆ ಸಮಾಜದ ಸ್ಪಂದನೆಯೂ ಧನಾತ್ಮಕವಾಗಿದೆ ಎಂದರು. ಅಭ್ಯಾಗತರಾಗಿ ಐಸಿಡಿಎಸ್ ಲಿ.ನ ಎಂ.ಡಿ. ಸುಜಿರ್ ಪ್ರಭಾಕರ, ಉದ್ಯಮಿ ರಮೇಶ್ ಎ. ಬಂಗೇರ, ಕುಮಾರ, ರಜನಿ ಕುಮಾರ, ರೇಖಾ ರಾಜಗೋಪಾಲ್, ಜಯಶ್ರೀ ರಮೇಶ್ ಹಾಗೂ ಯು. ವಿಶ್ವನಾಥ ಶೆಣೈ ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ. ಭಟ್, ಸದಸ್ಯರುಗಳಾದ ಯು.ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯ, ಕೃಷ್ಣಮೂರ್ತಿ ಭಟ್, ಕಿಶೋರ್ ಸಿ ಉದ್ಯಾವರ, ಎ. ಅಜಿತ್ ಕುಮಾರ್, ಗಣೇಶ್ ಬ್ರಹ್ಮಾವರ, ಎಚ್. ಎನ್ ವೆಂಕಟೇಶ್, ಗಣಪತಿ ಭಟ್, ಡಾ. ರಾಘವೇಂದ್ರ ರಾವ್, ನಿವೃತ್ತ ಪ್ರಾಂಶುಪಾಲೆ ತಾರಾ ಮೇಡಮ್,ಬೆಳ್ವೆಯ ಸಾಮಾಜಿಕ ಕಾರ್ಯಕರ್ತರು, ವಿದ್ಯಾಪೋಷಕ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”