ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ನಡೆದ ಯುವ ಸಂಸತ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ

ಉಡುಪಿ: ಯುವಕರಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ದೇಶದ ಸಂವಿಧಾನ ಹಾಗೂ ಸಂಸತ್ತಿನ ಕಾರ್ಯಕಲಾಪಗಳ ಬಗ್ಗೆ ಪರಿಚಯಿಸಲು ಯುವ ಸಂಸತ್ತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಂವಿಧಾನ ಹಾಗೂ ಸಂಸತ್ತಿನ ಕಾರ್ಯವಿಧಾನಗಳ ಬಗ್ಗೆ ಪ್ರಾಯೋಗಿಕ ಜ್ಞಾನ ನೀಡುವ ಯುವ ಸಂಸತ್ನಂತಹ ಕಾರ್ಯಕ್ರಮಗಳ ಆಯೋಜನೆ ಅರ್ಥಪೂರ್ಣ ಎಂದು ಶಾಸಕ ಯಶ್ಪಾಲ್ ಸುವರ್ಣ ಅಭಿಪ್ರಾಯಪಟ್ಟರು. ಅವರು ಶುಕ್ರವಾರ, ತಾಲೂಕು ಆಡಳಿತ ತಾಲೂಕು ಪಂಚಾಯತ್ ಶಿಕ್ಷಣ ಇಲಾಖೆ ಕಾನೂನು ಇಲಾಖೆ ಸಮಾಜ ಕಲ್ಯಾಣ ಇಲಾಖೆ ಜಂಟಿ ಆಶ್ರಯದಲ್ಲಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ನಡೆದ ಯುವ ಸಂಸತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 2047ರ ವೇಳೆಗೆ ದೇಶವು ಸಂಪೂರ್ಣ ಅಭಿವೃದ್ದಿ ಹೊಂದಿದ ವಿಕಸಿತ ಭಾರತವಾಗಬೇಕು ಎನ್ನುವುದು ನಮ್ಮೆಲ್ಲರ ಲಕ್ಷ್ಯ. ಈ ಲಕ್ಷ್ಯ ಪೂರ್ತಿಗಾಗಿ ಯುವಕರು ಸನ್ನದ್ದರಾಗಬೇಕು. ಭಾರತವು ಯುವ ದೇಶವಾಗಿದ್ದು, ಯುವಕರು ಸಂವಿಧಾನ ಹಾಗೂ ಸಂಸತ್ತಿನ ಕಾರ್ಯಕಲಾಪಗಳ ಬಗ್ಗೆ ಸರಿಯಾದ ಜ್ಞಾನ ಹೊಂದಿದ್ದಾಗ ದೇಶವನ್ನು ಅಭಿವೃದ್ದಿ ಪಥದಲ್ಲಿ ಮುನ್ನಡೆಸಬಹುದು. ಇತ್ತೀಚಿನ ದಿನಗಳಲ್ಲಿ ಕಾನೂನು ಪದವಿಗೆ ಬೇಡಿಕೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ಕಾನೂನು ಪದವಿ ಪಡೆಯುತ್ತಿರುವವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದ್ದು ಸಮಾಜದಲ್ಲಿ ಹೆಚ್ಚುತ್ತಿರುವ ಸಮಾನತೆಯನ್ನು ಇದು ಪ್ರತಿಪಾದಿಸುತ್ತಿದೆ. ಮಹಿಳೆಯರೂ ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದ ಅವರು, ವಿದ್ಯಾರ್ಥಿಗಳು ಯಾವುದೇ ಪೂರ್ವಾಗ್ರಹಗಳಿಲ್ಲದೆ ಸೌಹಾರ್ದಪೂರ್ಣವಾಗಿ ಚರ್ಚೆ ನಡೆಸಿ ಒಳ್ಳೆಯ ಅನುಭವ ಪಡೆಯಿರಿ ಎಂದರು.
ಕರಾವಳಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್ ಮಾತನಾಡಿ, ಇಂದಿನ ಸಮಾಜಕ್ಕೆ ಬಹು ಅಗತ್ಯವಾಗಿರುವ ಕಾರ್ಯಕ್ರಮ ಇದಾಗಿದ್ದು ವಿದ್ಯಾರ್ಥಿ ಜೀವನದಲ್ಲೇ ಕೇಂದ್ರ ಸಂಸತ್ತಿನ ಹಾಗೂ ರಾಜ್ಯದ ಎರಡೂ ಸದನಗಳ ಕಾರ್ಯಕಲಾಪಗಳ ಪರಿಚಯವಾಗಲಿದೆ. ಅತ್ಯಂತ ವಿಸ್ತೃತ ಸಂವಿಧಾನ ಹೊಂದಿರುವ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟç ಭಾರತ. ನಮ್ಮ ನಡವಳಿಕೆ ಮತ್ತು ಆಚರಣೆಗಳು ಸಂವಿಧಾನಬದ್ದವಾಗಿರಬೇಕು. ಮುಖ್ಯವಾಗಿ ಜೆನ್-ಝೀ ಹಾಗೂ ಜೆನ್-ಆಲ್ಫಾಗಳು ಸಂವಿಧಾನದ ಮತ್ತು ಸಂಸತ್ತಿನ ಬಗ್ಗೆ ಅರಿವು ಹೊಂದಲು ಯುವ ಸಂಸತ್ ಕಾರ್ಯಕ್ರಮ ಸಹಕಾರಿ. ಇದರಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ದ್ವೇಷ, ಅಸೂಯೆ, ಹಿಂಸೆ ಇಲ್ಲದಂತೆ ಚರ್ಚೆ ನಡೆಸಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಬೇಕು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿದಾಗ ಜನರು ನೀಡಿರುವ ಅಧಿಕಾರ ಸಾರ್ಥಕ್ಯ ಕಾಣುವುದು ಎಂದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಪಂಚಾಯತ್ನಿಂದ ಪಾರ್ಲಿಮೆಂಟ್ವರೆಗೆ ಜನರು ನಮ್ಮನ್ನು ತಮ್ಮ ಪ್ರತಿನಿಧಿಗಳಾಗಿ ಆರಿಸಿ ಕಳಿಸುತ್ತಾರೆ. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಅಥವಾ ಸಂಸತ್ತೇ ಇರಲಿ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಒಟ್ಟಾಗಿ ಕೆಲಸ ಮಾಡಬೇಕು. ತಮ್ಮನ್ನು ಆರಿಸಿ ಕಳುಹಿಸಿದ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿ ಜನತೆಗೆ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಯುವ ಸಂಸತ್ ಒಂದು ಮಾದರಿ ಕಾರ್ಯಕ್ರಮ. ಇಲ್ಲಿ ಪಡೆದ ಅನುಭವವನ್ನು ಮುಂದಿನ ದಿನಗಳಲ್ಲಿ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ವಿಜಯಾ, ತಾಲೂಕು ವಕೀಲರ ಸಂಘದ ಅಧ್ಯಕ್ಷ ರೆನಾಲ್ಡ್ ಪ್ರವೀಣ್ ಕುಮಾರ್, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ, ತೀರ್ಪುಗಾರರಾಗಿ ಎಂಜಿಎಮ್ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಅದಿತಿ ಭಟ್, ನಿವೃತ್ತ ಉಪನ್ಯಾಸಕ ಸುರೇಂದ್ರನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಸ್ವಾಗತಿಸಿ, ಸಿಬ್ಬಂದಿ ಶ್ರೀದೇವಿ ನಿರೂಪಿಸಿ, ಕಚೇರಿ ಅಧೀಕ್ಷಕಿ ವಿಜಯಲಕ್ಷ್ಮಿ ವಂದಿಸಿದರು.
“ಎಲ್ಲರಿಗೂ ಅಭಿನಂದನೆ - ಪ್ರಾಂಶುಪಾಲೆ ಡಾ.ಸುರೇಖಾ”
ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ.ಸುರೇಖಾ ಕೆ. ಮಾತನಾಡಿ, ಯುವ ಸಂಸತ್ತು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಇದರಲ್ಲಿ ಕೆಲವರಾದರೂ ಇಂದು ತಾವು ನಿಭಾಯಿಸಿದ ಸಚಿವ ಸ್ಥಾನವನ್ನು ಮುಂದೊಂದು ದಿನ ನಿಜ ಜೀವನದಲ್ಲೂ ನಿಭಾಯಿಸಬಹುದು. ಆಗ ಇಲ್ಲಿ ಪಡೆದ ಅನುಭವಗಳು ಸಹಾಯಕ್ಕೆ ಬರುವುದು. ಕಾಲೇಜಿನಲ್ಲಿ ಯುವ ಸಂಸತ್ ಕಾರ್ಯಕ್ರಮವನ್ನು ಆಯೋಜಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”