ತಾಯಿಯನ್ನು ನೆರೆಮನೆಯವರೆಂದ ಮಗಳು

ಬುರ್ಖಾಧಾರಿ ಮಹಿಳೆಯರು ಜಿಲ್ಲಾ ಉಸ್ತುವಾರಿ ಸಚಿವರನ್ನೇ ಯಾಮಾರಿಸಿದ್ದಾರೆ - ಯಶ್ಪಾಲ್ ಸುವರ್ಣ ಉಡುಪಿ: ಬುರ್ಖಾಧಾರಿ ಮಹಿಳೆಯರು ಜಿಲ್ಲಾ ಉಸ್ತುವಾರಿ ಸಚಿವರನ್ನೇ ತಪ್ಪು ಮಾಹಿತಿ ನೀಡಿ ಯಾಮಾರಿಸಿದ್ದಾರೆ. ತನ್ನ ಸ್ವಂತ ತಾಯಿಯನ್ನೇ ನೆರೆಮನೆಯವರು ಎಂದು ಹೇಳುವ ಮೂಲಕ ತಪ್ಪು ಮಾಹಿತಿ ನೀಡುವುದು ಅಕ್ಷಮ್ಯ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ. ಜಿಲ್ಲೆಗೆ ಅತಿಥಿಯಾಗಿ ಆಗಮಿಸುವ ಉಸ್ತುವಾರಿ ಸಚಿವರು ಬಿಜೆಪಿ ಜನಪ್ರತಿನಿಧಿಗಳನ್ನು ಕಾಮಾಲೆ ಕಣ್ಣಿನಿಂದ ನೋಡುತ್ತಾರೆ ಹಾಗೂ ಕೋಮುವಾದಿಗಳು ಎಂಬಂತೆ ಬಿಂಬಿಸಲು ಹೊರಟಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ಘಟನೆಯ ಸತ್ಯ ಸತ್ಯತೆ ತಿಳಿಯದೆ ಮಾಧ್ಯಮದ ಮುಂದೆ ಬಿಜೆಪಿ ಪಕ್ಷಕ್ಕೆ ಸೌಹಾರ್ದತೆಯ ಪಾಠ ಮಾಡಲು ಹೋಗಿ ಉಸ್ತುವಾರಿ ಸಚಿವರು ಪೇಚಿಗೆ ಸಿಲುಕಿದ್ದಾರೆ ಎಂದು ವ್ಯಂಗಿಸಿದರು. ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ಸೌಹಾರ್ದತೆಯ ಬಗ್ಗೆ ಬೆಳಗಾವಿಯಿಂದ ಆಗಮಿಸಿದ ಹೆಬ್ಬಾಳ್ಕರ್ ಬಳಿ ಪಾಠ ಕಲಿಯುವ ಅನಿವಾರ್ಯತೆ ಬಂದಿಲ್ಲ. ಈ ಘಟನೆಯ ಬಗ್ಗೆ ಉನ್ನತಮಟ್ಟದ ತನಿಖೆಯಯ ಅಗತ್ಯವಿದೆ. ಸ್ವಂತ ತಾಯಿಯನ್ನೇ ನೆರೆಮನೆಯವರೆಂದು ಹೇಳುವ ಹಿಜಾಬ್ ಬುರ್ಖಾಧಾರಿ ಮಹಿಳೆಯರ ಮನಸ್ಥಿತಿಯನ್ನು ಜಿಲ್ಲೆಯ ಪ್ರಜ್ಞಾವಂತ ಸಮಾಜ ಗಂಭೀರವಾಗಿ ಪರಿಗಣಿಸಬೇಕಿದೆ. ಉಡುಪಿ ಜಿಲ್ಲೆಯ ಐದು ಮಂದಿ ಬಿಜೆಪಿ ಶಾಸಕರು ಜಿಲ್ಲೆಯ ಸಂಸದರು ಎಂದಿಗೂ ತಮ್ಮ ಕಚೇರಿಗೆ ಆಗಮಿಸಿದವರ ಜಾತಿ ಮತ ಕೇಳಿಲ್ಲ ಯಾವತ್ತು ತಾರತಮ್ಯ ಮಾಡಿಲ್ಲ. ಆದರೆ ರಾಷ್ಟ್ರೀಯತೆ ವಿಚಾರದಲ್ಲಿ ಮತೀಯವಾದ ಶಕ್ತಿಗಳು ಹಾಗೂ ಹಿಂದುತ್ವ ವಿರೋಧಿಗಳ ಬಗ್ಗೆ ಎಂದಿಗೂ ರಾಜ ಮಾಡಿಕೊಂಡಿಲ್ಲ ಮುಂದೆಯೂ ರಾಜಿ ಮಾಡಲು ಸಿದ್ಧವಿಲ್ಲ. ಈ ಘಟನೆಯನ್ನು ಗಮನಿಸಿದಾಗ ಮುಂದಿನ ದಿನಗಳಲ್ಲಿ ಸರಕಾರಿ ಕಚೇರಿಗಳಲ್ಲಿ ಬುರ್ಖಾ ಹಾಗೂ ಹಿಜಾಬ್ ಧರಿಸುವ ವ್ಯಕ್ತಿಗಳ ಬಗ್ಗೆ ವಿಶೇಷ ನಿಗ ವಹಿಸುವ ಸನ್ನಿವೇಶ ನಿರ್ಮಾಣವಾಗಲಿದೆ. ಘಟನೆಯ ಸತ್ಯತೆ ತಿಳಿಯದೆ ಬಿಜೆಪಿ ವಿರುದ್ಧ ಅಪಮಾನಕರ ಹೇಳಿಕೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಕ್ಷಮೆಯಾಚಿಸಬೇಕು. ಉಸ್ತುವಾರಿ ಸಚಿವರ ಇಂತಹ ಬೇಜವಾಬ್ದಾರಿ ಹೇಳಿಕೆಗಳು ಮುಂದುವರಿದರೆ ಜಿಲ್ಲಾ ಬಿಜೆಪಿ ವತಿಯಿಂದ ಮುಂದಿನ ಬಾರಿ ಭೇಟಿ ನೀಡಿ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”