ಜುಲೈ 30ರಿಂದ ಆಗಸ್ಟ್ 2ರವರೆಗೆ ವಾಷಿಂಗ್ಟನ್ ರಾಜ್ಯದ ಬೆಲ್ವ್ಯೂ ನಗರದ ಹಯಾತ್ ರೀಜೆನ್ಸಿಯಲ್ಲಿ ವಿಜೃಂಭಣೆಯಿಂದ ನಡೆಯಿತು.

ವಾಷಿಂಗ್ಟನ್: ಉತ್ತರ ಅಮೆರಿಕದ ಬಂಟರ ಸಂಘ ಆಯೋಜಿಸಿದ್ದ ‘ದಿಬ್ಬಣ–2026’ 25ನೇ ರಜತ ಮಹೋತ್ಸವ ಮಹಾಸಮ್ಮೇಳನ ಜುಲೈ 30ರಿಂದ ಆಗಸ್ಟ್ 2ರವರೆಗೆ ವಾಷಿಂಗ್ಟನ್ ರಾಜ್ಯದ ಬೆಲ್ವ್ಯೂ ನಗರದ ಹಯಾತ್ ರೀಜೆನ್ಸಿಯಲ್ಲಿ ವಿಜೃಂಭಣೆಯಿಂದ ನಡೆಯಿತು. ಉತ್ತರ ಅಮೆರಿಕದ ಬಂಟರ ಸಂಘದ 25ನೇ ಅಧ್ಯಕ್ಷ ಗುಳ್ಳಾಡಿ ಮಂಜುನಾಥ್ ಆರ್. ಶೆಟ್ಟಿ (ಸ್ನೋಕ್ವಾಲ್ಮಿ, ವಾಷಿಂಗ್ಟನ್) ಅವರ ದೂರದೃಷ್ಟಿಯ ನಾಯಕತ್ವದಲ್ಲಿ ನಡೆದ ಈ ಮಹಾಸಮ್ಮೇಳನವು ಸಂಘದ 47 ವರ್ಷಗಳ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿ ಮೂಡಿಬಂತು. ಕಾರ್ಯಕಾರಿ ಸಮಿತಿ, ಸಂಘಟನಾ ಸಮಿತಿ ಹಾಗೂ ನೂರಾರು ಸ್ವಯಂಸೇವಕರ ಸಮರ್ಪಿತ ಸೇವೆ ಸಮಾವೇಶದ ಯಶಸ್ಸಿಗೆ ಪ್ರಮುಖ ಕಾರಣವಾಯಿತು. ಅಮೆರಿಕ, ಕೆನಡಾ, ಭಾರತ, ಆಸ್ಟ್ರೇಲಿಯಾ, ಯುಎಇ, ಇಂಡೋನೇಷ್ಯಾ, ಕಾಂಬೋಡಿಯಾ ಹಾಗೂ ಓಮನ್ ಸೇರಿದಂತೆ ವಿವಿಧ ದೇಶಗಳಿಂದ 600ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ಅತಿಥಿಗಳು ಭಾಗವಹಿಸಿದ್ದರು. ವಿಶೇಷವಾಗಿ ಸುಮಾರು ಶೇ.30ರಷ್ಟು ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆ ಸಮಾವೇಶದ ಗಮನ ಸೆಳೆಯಿತು. ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತದೊಂದಿಗೆ ಆರಂಭಗೊಂಡ ಉದ್ಘಾಟನಾ ಸಮಾರಂಭದಲ್ಲಿ ಸಿಯಾಟಲ್ನ ಭಾರತದ ಕಾನ್ಸುಲ್ ಜನರಲ್ ಪ್ರಕಾಶ್ ಗುಪ್ತಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿದೇಶದಲ್ಲಿ ಭಾರತೀಯ ಸಂಸ್ಕೃತಿ, ಭಾಷೆ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಉತ್ತರ ಅಮೆರಿಕದ ಬಂಟರ ಸಂಘದ ಸೇವೆಯನ್ನು ಅವರು ಶ್ಲಾಘಿಸಿದರು. ಸಮಾವೇಶದಲ್ಲಿ ದೇಶ-ವಿದೇಶಗಳ ಉದ್ಯಮಿಗಳು, ಸಮಾಜಸೇವಕರು, ವೈದ್ಯರು, ಶಿಕ್ಷಣತಜ್ಞರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು. ಡಾ. ಸದಾಶಿವ ಶೆಟ್ಟಿ ಕನ್ಯಾನ, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ರಾಜಶ್ರೀ ಕೆ. ವಾಸುದೇವ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ಸುಧಾರಾಮನ್ ಶೆಟ್ಟಿ, ಕೆ. ಶಿವರಾಮ ಶೆಟ್ಟಿ, ಡಾ. ಆರ್.ಕೆ. ಶೆಟ್ಟಿ, ಗೋಪಾಲಕೃಷ್ಣ ಶೆಟ್ಟಿ, ಪ್ರೇಮನಾಥ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ರಜತ ಮಹೋತ್ಸವದ ಅಂಗವಾಗಿ ಸಂಘದ ಬೆಳವಣಿಗೆಗೆ ಕೊಡುಗೆ ನೀಡಿದ ಸ್ಥಾಪಕ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಹಾಗೂ ಹಿರಿಯ ನಾಯಕರನ್ನು ‘BANA Circle of Honor’ ಮೂಲಕ ಗೌರವಿಸಲಾಯಿತು. ಶಂಕರ್ ಶೆಟ್ಟಿ, ಡಾ. ರವಿ ಶೆಟ್ಟಿ, ಡಾ. ದಿನಕರ ರೈ, ಕೊಳ್ಕೆಬೈಲು ಮಹಾಬಲ ಶೆಟ್ಟಿ ಹಾಗೂ ಡಾ. ಕೆ. ನಾರಾಯಣ ಶೆಟ್ಟಿ ಸೇರಿದಂತೆ ಹಿರಿಯರ ಸೇವೆಯನ್ನು ಸ್ಮರಿಸಲಾಯಿತು. ದೂರದೃಷ್ಟಿಯ ನಾಯಕತ್ವಕ್ಕಾಗಿ ಮುಲ್ಕಿ ಸುಂದರ್ ರಾಮ ಶೆಟ್ಟಿಯವರಿಗೆ ಮರಣೋತ್ತರವಾಗಿ ‘Bunts Circle of Honor’ ಪ್ರಶಸ್ತಿ ಪ್ರದಾನಿಸಲಾಯಿತು. ಅವರ ಕಿರಿಯ ಪುತ್ರಿ ಊರ್ಮಿಳಾ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ಸಮಾಜಸೇವೆ, ದಾನಶೀಲತೆ ಹಾಗೂ ಸಮುದಾಯದ ಮೇಲಿನ ಪ್ರಭಾವಕ್ಕಾಗಿ ಡಾ. ಶಾಂತರಾಮ ಶೆಟ್ಟಿ ಹಾಗೂ ಶೇಖರ್ ನಾಯಕ್ ಅವರನ್ನೂ ‘BANA Distinguished Impact Award’ ಮೂಲಕ ಗೌರವಿಸಲಾಯಿತು. ಮೂರು ದಿನಗಳ ಸಮಾವೇಶದಲ್ಲಿ ಕ್ರೀಡಾಕೂಟ, ತಂತ್ರಜ್ಞಾನ ಅಧಿವೇಶನ, ಉದ್ಯಮಿಗಳ ಸಮಾವೇಶ, ಯುವಜನ ಮತ್ತು ಮಹಿಳಾ ವೇದಿಕೆ, ಮಕ್ಕಳ ಪ್ರತಿಭಾ ಪ್ರದರ್ಶನ, ಸಾಹಿತ್ಯ ಕಾರ್ಯಕ್ರಮ, ಸಮಾಜಸೇವಾ ಚಟುವಟಿಕೆಗಳು, ಜಾನಪದ ನೃತ್ಯ, ಸಂಗೀತ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕರಾವಳಿ ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ವಿಶೇಷ ಪ್ರದರ್ಶನಗಳು ಗಮನ ಸೆಳೆದವು. ತುಳುನಾಡಿನ ಸಾಂಪ್ರದಾಯಿಕ ಆಹಾರವೂ ‘ದಿಬ್ಬಣ–2026’ರ ಪ್ರಮುಖ ಆಕರ್ಷಣೆಯಾಗಿತ್ತು. ಕೋಳಿ ಗಸಿ, ಕೋಳಿ ರೊಟ್ಟಿ, ಘೀ ರೋಸ್ಟ್, ರಾಗಿ ಮಣ್ಣಿ ಸೇರಿದಂತೆ ಕರಾವಳಿಯ ಸವಿರುಚಿಗಳು ಅತಿಥಿಗಳ ಮೆಚ್ಚುಗೆಗೆ ಪಾತ್ರವಾದವು. ಸಮಾವೇಶದ ಮತ್ತೊಂದು ವಿಶೇಷವೆಂದರೆ ಬಂಟ ಸಮುದಾಯದ ಜಾಗತಿಕ ವೈವಾಹಿಕ ವೇದಿಕೆಯಾದ ‘BuntsMatch’ ಪರಿಚಯ. ವಿಶ್ವದ ವಿವಿಧ ಭಾಗಗಳಲ್ಲಿರುವ ಬಂಟ ಯುವಜನರನ್ನು ಸಂಪರ್ಕಿಸುವ ಉದ್ದೇಶದ ಈ ಡಿಜಿಟಲ್ ವೇದಿಕೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಅಧ್ಯಕ್ಷೀಯ ಅಧಿಕಾರ ಹಸ್ತಾಂತರ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷೀಯ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು. 2025–26ನೇ ಸಾಲಿನ ಅಧ್ಯಕ್ಷ ಗುಳ್ಳಾಡಿ ಮಂಜುನಾಥ್ ಆರ್. ಶೆಟ್ಟಿ ಅವರು 2027–28ನೇ ಅವಧಿಗೆ ಉತ್ತರ ಅಮೆರಿಕದ ಬಂಟರ ಸಂಘದ ಮುಂದಿನ ಅಧ್ಯಕ್ಷ ಹಾಗೂ ಟ್ರೈ-ಸ್ಟೇಟ್ ರೀಜನ್ (ನ್ಯೂಯಾರ್ಕ್) ಪ್ರತಿನಿಧಿ ಸುರೇಶ್ ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಉಪಾಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಸೀಮಾ ಶೆಟ್ಟಿ ಹಾಗೂ ಹಿತೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಮಿತಾ ಶೆಟ್ಟಿ, ಖಜಾಂಚಿ ಆದ್ಯಾ ಕುಮಾರ್, ಯುವ ಕಾರ್ಯನಿರ್ವಾಹಕ ನಿರ್ದೇಶಕ ವಿಜೇತ್ ಶೆಟ್ಟಿ ಹಾಗೂ ‘One Team Seattle’ ತಂಡದ ಸದಸ್ಯರ ಸಮನ್ವಯ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಲಾಯಿತು. ಗುಳ್ಳಾಡಿ ಮಂಜುನಾಥ್ ಶೆಟ್ಟಿ ಅವರ ನಾಯಕತ್ವ, ಸಂಘಟನಾ ಕೌಶಲ್ಯ ಹಾಗೂ ಸಮುದಾಯವನ್ನು ಒಗ್ಗೂಡಿಸುವ ದೃಷ್ಟಿಕೋನದಿಂದ ‘ದಿಬ್ಬಣ–2026’ ಉತ್ತರ ಅಮೆರಿಕದ ಬಂಟರ ಸಂಘದ ಇತಿಹಾಸದಲ್ಲೇ ಸ್ಮರಣೀಯ ರಜತ ಮಹೋತ್ಸವವಾಗಿ ಗುರುತಿಸಿಕೊಂಡಿತು. ಸಂಸ್ಕೃತಿ–ಸೇವೆ–ಸಂಘಟನೆ–ಯುವಶಕ್ತಿ ಎಂಬ ನಾಲ್ಕು ಆಯಾಮಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ‘ದಿಬ್ಬಣ–2026’, ಜಾಗತಿಕ ಬಂಟ ಸಮುದಾಯದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”