ಉಬುದ್ನಲ್ಲಿ ಸುಧಾಕರ್ ಶೆಟ್ಟಿ ಅವರ ‘ಅಶ್ವಾ’ ಫೈವ್ಸ್ಟಾರ್ ರೆಸಾರ್ಟ್ ಭವ್ಯ ಉದ್ಘಾಟನೆ

ಬಾಲಿ (ಇಂಡೋನೇಷ್ಯಾ): ಕಾರ್ಕಳ ತಾಲೂಕಿನ ಹೋಸ್ಮಾರು ಮೂಲದ ಉದ್ಯಮಿ ಹಾಗೂ RF Hospitality ಸಂಸ್ಥೆಯ ಮುಖ್ಯಸ್ಥರಾದ ಸುಧಾಕರ್ ಶೆಟ್ಟಿ ಅವರ ಮಾಲೀಕತ್ವದ ಅಶ್ವಾ ಫೈವ್ ಸ್ಟಾರ್ ರೆಸಾರ್ಟ್ ಹಾಗೂ ಉಡುಪಿ ಗ್ರೂಪ್ ರೆಸ್ಟೋರೆಂಟ್ ಇಂಡೋನೇಷ್ಯಾದ ಬಾಲಿಯ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಉಬುದ್ನಲ್ಲಿ ಭವ್ಯವಾಗಿ ಶುಭಾರಂಭಗೊಂಡಿತು.
ಗ್ರ್ಯಾಂಡ್ ಓಪನಿಂಗ್ ಸಮಾರಂಭದಲ್ಲಿ ದೇಶ-ವಿದೇಶಗಳ ಗಣ್ಯ ಅತಿಥಿಗಳು, ಉದ್ಯಮಿಗಳು, ಪ್ರವಾಸೋದ್ಯಮ ಕ್ಷೇತ್ರದ ಪ್ರತಿನಿಧಿಗಳು ಹಾಗೂ ಆಹ್ವಾನಿತರು ಭಾಗವಹಿಸಿ ನೂತನ ರೆಸಾರ್ಟ್ಗೆ ಶುಭ ಹಾರೈಸಿದರು.
ವಿಶ್ವಮಟ್ಟದ ಆತಿಥ್ಯ ಸೇವೆ, ಅತ್ಯಾಧುನಿಕ ಸೌಲಭ್ಯಗಳು, ಐಷಾರಾಮಿ ವಾಸ್ತವ್ಯ, ಭಾರತೀಯ ಸಾಂಪ್ರದಾಯಿಕ ಆಹಾರ ಪದಾರ್ಥಗಳು ಹಾಗೂ ಬಾಲಿಯ ಶ್ರೀಮಂತ ಸಾಂಸ್ಕೃತಿಕ ಸೊಬಗನ್ನು ಒಂದೇ ಸೂರಿನಡಿ ಅತಿಥಿಗಳಿಗೆ ಒದಗಿಸುವ ಉದ್ದೇಶದಿಂದ ಈ ಫೈವ್ ಸ್ಟಾರ್ ರೆಸಾರ್ಟ್ ನಿರ್ಮಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸುಧಾಕರ್ ಶೆಟ್ಟಿ, ಯವರು "ಬಾಲಿಗೆ ಆಗಮಿಸುವ ದೇಶ-ವಿದೇಶಗಳ ಪ್ರವಾಸಿಗರಿಗೆ ಅತ್ಯುನ್ನತ ಗುಣಮಟ್ಟದ ಆತಿಥ್ಯ ಸೇವೆಯನ್ನು ನೀಡುವ ಸಂಕಲ್ಪದೊಂದಿಗೆ ಅಶ್ವಾ ಫೈವ್ ಸ್ಟಾರ್ ರೆಸಾರ್ಟ್ ಅನ್ನು ಆರಂಭಿಸಿದ್ದೇವೆ. ಭಾರತೀಯ ಆಹಾರ ಮತ್ತು ಆತಿಥ್ಯ ಪರಂಪರೆ ಮತ್ತು ಬಾಲಿಯ ಶ್ರೀಮಂತ ಸಂಸ್ಕೃತಿಯ ಸಮನ್ವಯದ ಮೂಲಕ ಅತಿಥಿಗಳಿಗೆ ವಿಶಿಷ್ಟ ಹಾಗೂ ಮರೆಯಲಾಗದ ಅನುಭವವನ್ನು ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ," ಎಂದು ಹೇಳಿದರು.
ಅಶ್ವಾ ಫೈವ್ ಸ್ಟಾರ್ ರೆಸಾರ್ಟ್ನ ಉದ್ಘಾಟನೆಯು ಭಾರತೀಯ ಆತಿಥ್ಯ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗ ಉದ್ಯಮಿ ಸುಧಾಕರ್ ಶೆಟ್ಟಿ ಅವರ ಯಶಸ್ಸಿಗೆ ಹೊಸ ಅಧ್ಯಾಯವನ್ನು ಸೇರ್ಪಡೆಗೊಳಿಸಿದೆ. ಈ ಸಾಧನೆಯು ಕರ್ನಾಟಕದ ಜನತೆಗೆ ಹೆಮ್ಮೆಯ ವಿಷಯವಾಗಿದ್ದು, ಜಾಗತಿಕ ಆತಿಥ್ಯ ಉದ್ಯಮದಲ್ಲಿ ಕನ್ನಡಿಗರ ಸಾಮರ್ಥ್ಯವನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”