ಸಂವಿಧಾನದ 21 ನೇ ವಿಧಿಯಲ್ಲಿ ಹೇಳಿರುವ "ತ್ವರಿತ ವಿಚಾರಣೆ" ಮೂಲಭೂತ ಹಕ್ಕು. ಇದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿರುವ ಉಡುಪಿ ನ್ಯಾಯಾಲಯಗಳು

ಉಡುಪಿ: ಬಾಗಿದ ಬೆನ್ನು, ಕೈಯಲ್ಲೊಂದು ಚೀಲ. ಹಳೆಯ ಸೀರೆಯುಟ್ಟ ಅಜ್ಜಿ ಹೇಳಿದ್ದಿಷ್ಟೇ. "ವರ್ಷಗಳೇ ಆದವು ಸ್ವಾಮಿ. ಈ ನ್ಯಾಯಾಲಯದ ಮೆಟ್ಟಿಲು ಹತ್ತಿ, ಇಳಿದು ಚಪ್ಪಲಿ ಸವೆಯಿತು. ಸೀರೆ ತೂತಾಯಿತು ಬಿಟ್ಟರೇ ಪ್ರಕರಣ ಮುಕ್ತಾಯಗೊಳ್ಳುತ್ತಿಲ್ಲ. ಹೀಗೆ ನ್ಯಾಯಾಂಗದ ವ್ಯವಸ್ಥೆಯನ್ನು ಅಣಕವಾಡುವಂತೆ ನಡೆಯುತ್ತಿದ್ದ ಘಟನೆಗಳು ಪುನರಾವರ್ತನೆ ಆಗದಂತೆ ಉಡುಪಿಯ ನ್ಯಾಯಾಲಯಗಳಲ್ಲಿ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ವಿಶೇಷ ವರದಿಯನ್ನು ಓದುಗ ದೊರೆಗಳಿಗೆ ಅರ್ಪಿಸುತ್ತಿದ್ದೇವೆ. ನ್ಯಾಯಾಲಯದಲ್ಲಿ ಇಂತಹ ಅನೇಕ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ನ್ಯಾಯಾಧೀಶರುಗಳು ಪಣತೊಟ್ಟಿದ್ದಾರೆ. ಸಂವಿಧಾನದ 21 ನೇ ವಿಧಿಯಲ್ಲಿ ಹೇಳಿರುವ "ತ್ವರಿತ ವಿಚಾರಣೆ" ಮೂಲಭೂತ ಹಕ್ಕು. ಇದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಉಡುಪಿ ಜಿಲ್ಲೆಯ "ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶ ಹಾಗು ಸಿಜೆಎಮ್ ಎಮ್.ಪುರುಷೋತ್ತಮ್ ಅವರ ನೇತೃತ್ವದಲ್ಲಿ ಜಿಲ್ಲೆಯ ಪೋಲಿಸ್ ಅಧಿಕಾರಿಗಳು ಮತ್ತು ಕೋರ್ಟ್ ಪಿಸಿ ( ಠಾಣೆಯಿಂದ ಒಬ್ಬರು ನ್ಯಾಯಾಲಯದ ಆಗುಹೋಗುಗಳನ್ನು ನೋಡಿಕೊಳ್ಳುವ ಸಿಬ್ಬಂದಿ) ಸಭೆ ಕರೆದು "ಸುನೀತಾ ಅಂತರಾಳಕ್ಕೆ ಮುಳ್ಳು ಮೊನೆ ತಾಗುವಂತೆ" ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರ ಪರಿಣಾಮವಾಗಿ ದಶಕಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೋಲಿಸರು ಪತ್ತೆ ಹಚ್ಚುತ್ತಿದ್ದಾರೆ.
ಭಾರತದ ಸಂವಿಧಾನ 21 ನೇ ವಿಧಿಯಲ್ಲಿ “ಕಾನೂನಿನ ಪ್ರಕ್ರಿಯೆ ಅನುಸರಿಸದೆ ಯಾರ ಜೀವನ ಅಥವಾ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಾರದು." ಎಂದು ವ್ಯಾಖ್ಯಾನಿಸಲಾಗಿದೆ. ಇದರಂತೆ ಭಾರತದ ಸರ್ವೋಚ್ಚ ನ್ಯಾಯಾಲಯವು "ಹುಸೈನರಾ ಖಾತೂನ್ vs ಸ್ಟೇಟ್ ಆಫ್ ಬಿಹಾರ್ (1979-80) ಪ್ರಕರಣದಲ್ಲಿ ತ್ವರಿತ ವಿಚಾರಣೆಯೂ ಸಂವಿಧಾನದ 21 ನೇ ವಿಧಿಯಲ್ಲಿ ಮೂಲಭೂತ ಹಕ್ಕು ಎಂದು ತೀರ್ಪು ನೀಡಿದೆ. ಎ.ಆರ್ ಅಂತುಲೇ vs ಆರ್.ಎಸ್ ನಾಯಕ್ (1992) ಪ್ರಕರಣದಲ್ಲಿ ಆರ್ಟಿಕಲ್ 21 ರ ಅಡಿಯಲ್ಲಿ ತನಿಖೆ, ವಿಚಾರಣೆ, ನ್ಯಾಯಪ್ರಕ್ರಿಯೆ, ಮೇಲ್ಮನವಿ, ಮರುಪರಿಶೀಲನೆ, ಮರು ವಿಚಾರಣೆ ಪ್ರಾಸಿಕ್ಯೂಷನ್ನಿಂದ ಅನಗತ್ಯ ವಿಳಂಬವಾದರೆ, ಅದು ಈ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂದು ಹೇಳಿದೆ.
ಈಗಾಗಲೇ ವಿವಿಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ 122 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅದರಲ್ಲಿ 60 ಪ್ರಕರಣ ಮುಕ್ತಾಯಗೊಂಡಿದೆ. ದಶಕಗಳಿಂದ ಬಾಕಿಯಿದ್ದ ಪ್ರಕರಣಗಳು ತಿಂಗಳೊಳಗೆ ಮುಕ್ತಾಯಗೊಂಡಿರುವುದು ಅನ್ಯಾಯಕ್ಕೆ ಒಳಗಾದವರ ಮುಖದಲ್ಲಿ ಮಂದಹಾಸ ಮೂಡಿಸಿದೆ. ವಾರೆಂಟ್ ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ನ್ಯಾಯದಾನ ಪ್ರಕ್ರಿಯೆಯಲ್ಲಿ ಕೊಂಚ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಆರಂಭಿಸಿದ ಬಳಿಕ ಚೆಕ್ ಅಮಾನ್ಯ ಪ್ರಕರಣಗಳನ್ನು ಲೋಕ ಅದಾಲತ್ನಲ್ಲಿ ಮುಕ್ತಾಯ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. 2025 ರಲ್ಲಿ ನಡೆದ ನಾಲ್ಕು ಲೋಕ ಅದಾಲತ್ನಲ್ಲಿ 1029 ಚೆಕ್ ಅಮಾನ್ಯ ಪ್ರಕರಣ ಒಟ್ಟು ₹ 29,09,75,923 ಕೋಟಿ ಮೊತ್ತವನ್ನು ಸಂತ್ರಸ್ತರಿಗೆ ದೊರಕಿಸಿ ಕೊಡಲಾಗಿದೆ.
8-3-2025 ಅದಾಲತ್ಗೆ ಆಯ್ಕೆ ಮಾಡಿದ್ದ ಪ್ರಕರಣ 427 ಇತ್ಯರ್ಥ - 249 ಇತ್ಯರ್ಥಗೊಂಡ ಪ್ರಕರಣದ ಒಟ್ಟು ಮೊತ್ತ - ₹ 7,81,62,834 ---------------------------- 12-7-2025 ಅದಾಲತ್ಗೆ ಆಯ್ಕೆ ಮಾಡಿದ್ದ ಪ್ರಕರಣ 443 ಇತ್ಯರ್ಥ - 248 ಇತ್ಯರ್ಥಗೊಂಡ ಪ್ರಕರಣದ ಒಟ್ಟು ಮೊತ್ತ - ₹ 10,12,68,723 ---------------------------- 13-9-2025 ಅದಾಲತ್ಗೆ ಆಯ್ಕೆ ಮಾಡಿದ್ದ ಪ್ರಕರಣ 306 ಇತ್ಯರ್ಥ - 189 ಇತ್ಯರ್ಥಗೊಂಡ ಪ್ರಕರಣದ ಒಟ್ಟು ಮೊತ್ತ - ₹ 3,35,31,312 ---------------------------- 13-12-2025 ಅದಾಲತ್ಗೆ ಆಯ್ಕೆ ಮಾಡಿದ್ದ ಪ್ರಕರಣ 481 ಇತ್ಯರ್ಥ - 343 ಇತ್ಯರ್ಥಗೊಂಡ ಪ್ರಕರಣದ ಒಟ್ಟು ಮೊತ್ತ - ₹ 7,80,13,054 ---------------------------- 2026 ಈ ವರ್ಷದ ಮೊದಲ ಲೋಕ ಅದಾಲತ್ನಲ್ಲಿ ಉತ್ತಮ ಸ್ಪಂದನೆ ದೊರಕಿದೆ. ಅದಾಲತ್ಗೆ ಆಯ್ಕೆ ಮಾಡಿದ್ದ ಪ್ರಕರಣ 522 ಇತ್ಯರ್ಥ - 391 ಇತ್ಯರ್ಥಗೊಂಡ ಪ್ರಕರಣದ ಒಟ್ಟು ಮೊತ್ತ - ₹ 5,71,62,488
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”


