ಬಿಟ್ಕಾಯಿನ್ ಹಗರಣದ ಪ್ರಮುಖ ಆರೋಪಿ

ಬೆಂಗಳೂರು: "ಬಿಟ್ಕಾಯಿನ್ ಹಗರಣದ ಸಂಬಂಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ, ಸುನೀಶ್ ಹೆಗಡೆ ಮತ್ತು ರಾಬಿನ್ ಖಂಡೇಲವಾಲ್ ಅವರನ್ನು 14 ದಿನ ಬೆಂಗಳೂರಿನ ವಿಶೇಷ ನ್ಯಾಯಾಲಯವು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ ಚಂದ್ರಶೇಖರ್ ರೆಡ್ಡಿ ಅವರು ಆರೋಪಿಗಳನ್ನು ಜೂನ್ 5ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದರು. ಮೇ 9ರಂದು ಆರೋಪಿಗಳನ್ನು 10 ದಿನ ಇ ಡಿ ಕಸ್ಟಡಿಗೆ ನೀಡಲಾಗಿತ್ತು. ಆನಂತರ ಐದು ದಿನ ಮತ್ತೆ ಇ ಡಿ ಕಸ್ಟಡಿ ವಿಸ್ತರಿಸಲಾಗಿತ್ತು. ಕರ್ನಾಟಕ ಸರ್ಕಾರ ಇ-ಪ್ರಕ್ಯೂರ್ಮೆಂಟ್ ಪೋರ್ಟಲ್ನಿಂದ ₹11.5 ಕೋಟಿ ಕದ್ದಿರುವುದು, ಭಾರತದ ಗೇಮಿಂಗ್ ವೆಬ್ಸೈಟ್ಗಳ ಹ್ಯಾಕಿಂಗ್ ಮತ್ತು ವಿದೇಶದಲ್ಲಿ ಕ್ರಿಪ್ಟೊ ಕರೆನ್ಸಿ ಬದಲಾವಣೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಇ ಡಿಯು ತನಿಖೆ ನಡೆಸುತ್ತಿದೆ. ಇತ್ತೀಚೆಗೆ ಶ್ರೀಕಿ ಸ್ನೇಹಿತ ಎನ್ನಲಾದ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮನೆಯಲ್ಲಿಯೂ ಇ ಡಿ ಶೋಧ ನಡೆಸಿತ್ತು. ಯುನೋಕಾಯಿನ್ ಹ್ಯಾಕಿಂಗ್ ಮತ್ತು ಕದ್ದಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿಯು ಶ್ರೀಕಿ ಮತ್ತಿತರರ ವಿರುದ್ಧ ತನಿಖೆ ನಡೆಸಿತ್ತು. ಗೇಮಿಂಗ್ ವೆಬ್ಸೈಟ್ಗಳ ಹ್ಯಾಕಿಂಗ್ ಮತ್ತು ಬಿಟ್ ಕಾಯಿನ್ ಬಳಸಿ ಡಾರ್ಕ್ನೆಟ್ ಮೂಲಕ ಮಾದಕದ್ರವ್ಯ ತರಿಸಿದ ಆರೋಪದ ಸಂಬಂಧ ಕಾಟನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”


