ಚೂಡಿದಾರದ ವೇಲ್ನಿಂದ ಕೊಲೆ

ಉಡುಪಿ: 2022 ರ ಮೇ.8 ರ ಮಧ್ಯರಾತ್ರಿ ಹಿರಿಯಡ್ಕ ಸಮೀಪದ ಆತ್ರಾಡಿ ಗ್ರಾಮದ ಮದಗ ಮುಳ್ಳುಗುಜ್ಜಿ ಎಂಬಲ್ಲಿನ ಮನೆಯಲ್ಲಿ ವಾಸವಿದ್ದ ತಾಯಿ ಹಾಗು 10 ವರ್ಷದ ಮಗುವನ್ನು ಕೊಂದ ಪ್ರಕರಣದಲ್ಲಿ ಆರೋಪಿಯೂ ಕೊಲೆ, ಸುಲಿಗೆ ಹಾಗು ಸಾಕ್ಷ್ಯ ನಾಶ ಮಾಡಿರುವುದು ದೃಢಪಟ್ಟಿದೆ ಎಂದು ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶ ಸಮೀವುಲ್ಲಾ ಅಭಿಪ್ರಾಯಪಟ್ಟು ಆರೋಪಿಯನ್ನು ದೋಷಿ ಎಂದು ಆದೇಶಿಸಿದ್ದಾರೆ. ಶಿಕ್ಷೆಗೆ ಗುರಿಯಾದ ಆರೋಪಿಯನ್ನು ಭದ್ರಾವತಿ ಮೂಲದ ಹರೀಶ್ (33) ಎಂದು ಗುರುತಿಸಲಾಗಿದೆ.
2022 ರ ಮೇ.8 ರಂದು ಆರೋಪಿ ಹರೀಶ್, ಚೆಲುವಿ ಹಾಗು ಆಕೆಯ ಮಗಳು ಪ್ರಿಯ(10) ಅವರನ್ನು ಕೊಂದು ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗು ಮೊಬೈಲ್ ಫೋನ್ ಸುಲಿಗೆ ಮಾಡಿದ್ದ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಭದ್ರಾವತಿ ನಿವಾಸಿಯಾಗಿದ್ದ ಆರೋಪಿ ಹರೀಶ್ ಚೆಲುವಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆಕೆಗೆ ಇತರರ ಜೊತೆಗೆ ಸಂಪರ್ಕ ಇದೆ ಎಂದು ಅನುಮಾನ ಹೊಂದಿದ್ದು, ಮೇ.8 ರಂದು ಚೆಲುವಿಗೆ ಕರೆ ಮಾಡಿ, ಆಕೆಯ ಮಗ ಹಾಗು ತಾಯಿ ಭದ್ರಾವತಿಗೆ ಹೋಗಿರುವುದನ್ನು ಖಚಿತ ಪಡಿಸಿಕೊಂಡು ರಾತ್ರಿ ಆಕೆಯ ಮನೆಗೆ ಬಂದಿದ್ದನು.
ಚೆಲುವಿಯ ಮೊಬೈಲನ್ನು ಪರಿಶೀಲಿಸಿ, ಆಕೆಗೆ ಬೇರೆಯವರ ಜೊತೆ ಫೋನ್ ಸಂಪರ್ಕ ಇರುವುದನ್ನು ಖಚಿತ ಪಡಿಸಿಕೊಂಡು, ನಿದ್ರೆಯಲ್ಲಿದ್ದ ಚೆಲುವಿಯನ್ನು ಮೆ.9 ಮುಂಜಾನೆ 12.30 ರ ಸುಮಾರಿಗೆ ಮನೆಯಲ್ಲಿದ್ದ ಚೆಲುವಿಯ ಚೂಡಿದಾರದ ವೇಲ್ನಿಂದ ಕುತ್ತಿಗೆಗೆ ಸುತ್ತಿ ಕಾಲಿನಿಂದ ಮುಖದ ಮೇಲೆ ನೆಲಕ್ಕೆ ಒತ್ತಿ ಹಿಡಿದು ಉಸಿರು ಗಟ್ಟಿಸಿ ಸಾಯಿಸಿದ್ದನು.
ನಂತರ ಮನೆಯಲ್ಲಿದ್ದ ಆಕೆಯ ಮಗಳು ಪ್ರಿಯ(10), ಕೊಲೆಯ ಬಗ್ಗೆ ಸಾಕ್ಷಿಯಾಗಬಹುದೆಂದು ಊಹಿಸಿ ಅದೇ ಶಾಲಿನಿಂದ ಮಗಳನ್ನು ಕೊಲೆ ಮಾಡಿ, ಆಕೆ ಧರಿಸಿದ್ದ ಚಿನ್ನದ ಸರ ಹಾಗು ಮೊಬೈಲ್ ಸುಲಿಗೆ ಮಾಡಿ ಸಾಕ್ಷ್ಯ ನಾಶ ಮಾಡಿದ್ದಾನೆ ಎಂದು ಪೋಲಿಸ್ ತನಿಖೆಯಲ್ಲಿ ಬಹಿರಂಗವಾಗಿತ್ತು.
“ಪ್ರಕರಣದ ತನಿಖೆಯನ್ನು ನಡೆಸಿದ ಅಂದಿನ ಬ್ರಹ್ಮಾವರ ವೃತ್ತನಿರೀಕ್ಷಕ ಅನಂತಪದ್ಮನಾಭ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ನ್ಯಾಯಾಲಯವು ಒಟ್ಟು 40 ಮಂದಿ ಸಾಕ್ಷಿಗಳ ವಿಚಾರಣೆಯನ್ನು ನಡೆಸಿತ್ತು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದಾರೆ”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”