ಉಡುಪಿಯ ಪ್ರತಿಷ್ಠಿತ ವಕೀಲ ದಿ.ಪಿ. ಶಿವಾಜಿ ಶೆಟ್ಟಿ ಸ್ಮಾರಕ 10ನೇ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಅಭಿಮತ

ಉಡುಪಿ: ಎಐ ಯುಗದಲ್ಲಿ ವಕೀಲ ವೃತ್ತಿಗೂ ತಂತ್ರಜ್ಞಾನದಿಂದ ಸವಾಲುಗಳು ಎದುರಾಗುತ್ತಿವೆ. ವಿದ್ಯಾರ್ಥಿಗಳು ಇದನ್ನು ಸಮರ್ಥವಾಗಿ ನಿಭಾಯಿಸಲು ಈಗಲೇ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಬೇಕು. ಸಾಧನೆ ಮಾಡಲು ನಿರಂತರ ಪರಿಶ್ರಮ ಬೇಕು. ನೀವು ಸಾಧಿಸುವ ಹಾದಿಯಲ್ಲಿ ನಾನಾ ಕ್ಲಿಷ್ಟಕರ ದಾರಿಗಳು ಬಂದು ವಿಫಲಗೊಳ್ಳಬಹುದು. ಆದರೆ, ನಿರಂತರ ಪರಿಶ್ರಮ, ನಿಮ್ಮನ್ನು ಸಾಧನೆಯ ಶಿಖರಕ್ಕೆ ಏರಿಸುತ್ತದೆ ಎಂದು ಹೈಕೋರ್ಟಿನ ನ್ಯಾ| ಎಸ್. ವಿಶ್ವಜಿತ್ ಶೆಟ್ಟಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಎ.10 ರಿಂದ 12 ರವರೆಗೆ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಉಡುಪಿಯ ಪ್ರತಿಷ್ಠಿತ ವಕೀಲ ದಿ.ಪಿ. ಶಿವಾಜಿ ಶೆಟ್ಟಿ ಸ್ಮಾರಕ 10ನೇ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯ ಅಂಗವಾಗಿ ಭಾನುವಾರ ನಡೆದ ಅಂತಿಮ ಸುತ್ತಿನಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ಮಾತನಾಡಿದರು. ವಕೀಲರ ವೃತ್ತಿಯೂ ಸೇವೆ. ಇದಕ್ಕೆ ಕಠಿಣ ಪರಿಶ್ರಮ ಅಗತ್ಯ. ಪ್ರತಿದಿನ ಹೊಸ ವಿಷಯಗಳನ್ನು ಕಲಿಯುತ್ತೇವೆ. ಕಾಲೇಜ್ ಮುಗಿದ ಬಳಿಕವೇ ಈ ವೃತ್ತಿಯ ನಿಜವಾದ ಇನ್ನಿಂಗ್ಸ್ ಆರಂಭಗೊಳ್ಳುತ್ತದೆ. ನ್ಯಾಯಾಲಯದಲ್ಲಿ ನೀವು ಕಾನೂನಿನ ವಿಶ್ಲೇಷಣೆಗಳ ಬಗ್ಗೆ ಕಲಿಯಲು ಸಾಧ್ಯವಾಗುತ್ತದೆ. ಪ್ರಕರಣಗಳನ್ನು ಹೇಗೆ ನಿಭಾಯಿಸಬೇಕೆಂದು ಕಲಿಯುವಿರಿ. ತಾಳ್ಮೆ ಮತ್ತು ನಿರಂತರ ಓದು ಈ ವೃತ್ತಿಯಲ್ಲಿ ಯಶಸ್ಸಿಗೆ ದಾರಿ ಎಂದರು. ಹಿಂದೆ ವಕೀಲ ವೃತ್ತಿಗೆ ಹೆಚ್ಚು ಅವಕಾಶ ಇರಲಿಲ್ಲ. ಈಗ ವಿಫುಲವಾದ ಅವಕಾಶವಿದೆ. ಪ್ರತಿದಿನ ಬದಲಾವಣೆ ಆಗುತ್ತಿರುವ ನೂತನ ಕಾಯ್ದೆ, ಕಾನೂನುಗಳ ಬಗ್ಗೆ ಗಮನವಿಟ್ಟು, ಅದರ ಬಗ್ಗೆ ಅಧ್ಯಯನ ನಡೆಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮಾನವಿಕಶಾಸ್ತ್ರ ವಿಭಾಗದ ಮುಖ್ಯಸ್ಥ ರೋಹಿತ್ ಆಮೀನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಕೀಲ ದಿ.ಪಿ.ಶಿವಾಜಿ ಶೆಟ್ಟಿಯವರ ಧರ್ಮಪತ್ನಿ ಜಯಂತಿ.ಪಿ ಶೆಟ್ಟಿ, ದೆಹಲಿಯ ಆದಾಯ ತೆರಿಗೆ ನ್ಯಾಯ ಮಂಡಳಿಯ ನ್ಯಾಯಿಕ ಸದಸ್ಯ ಯೊಗೇಶ್ ಕುಮಾರ್ ಯು.ಎಸ್, ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಪ್ರೊ.(ಡಾ.) ಚಿದಾನಂದ ರೆಡ್ಡಿ ಎಸ್. ಪಾಟೀಲ್, ಕಾಲೇಜಿನ ಪ್ರಾಂಶುಪಾಲೆ ಪ್ರೋ.ಸುರೇಖಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಮೇಧಾ ಪ್ರಾರ್ಥಿಸಿ, ಅಪರ್ಣಾಲಕ್ಷ್ಮೀ ಸ್ವಾಗತಿಸಿದರು. ಉಪಪ್ರಾಂಶುಪಾಲೆ ಡಾ.ಪ್ರೀತಿ ಹರೀಶ್ರಾಜ್ ವಂದಿಸಿದರು. ವಿದ್ಯಾರ್ಥಿ ವಸುದೇವ್ ತಿಲಕ್ ನಿರೂಪಿಸಿದರು.
“ಸ್ಪರ್ಧೆಯಲ್ಲಿ ಹೊರರಾಜ್ಯದ ಪುಣೆ, ಕೇರಳ, ತೆಲಂಗಾಣ ಸೇರಿದಂತೆ ಒಟ್ಟು 28 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಅಣಕು ನ್ಯಾಯಾಲಯದ ಸ್ಪರ್ಧೆಯಲ್ಲಿ ಬೆಂಗಳೂರಿನ ಬಿಎಮ್ಎಸ್ ಲಾ ಕಾಲೇಜಿನ ಅಮಲೆಂದು.ಕೆ, ವಂಶಿಕಾ ಅರೋರಾ, ಲಿಶಾ ಮಂಜುನಾಥ್ ತಂಡವು ಪ್ರಥಮ, ಬೆಂಗಳೂರಿನ ಕೆಎಲ್ಇ ಲಾ ಕಾಲೇಜಿನ ಪೂರ್ಣಚಂದ್ರ ತೇಜಸ್ವಿ, ಲಾಂಚನ.ಎಮ್.ನಾಯಕ, ಅಭಿಲಾಶ್.ಎಮ್ ತಂಡವು ದ್ವೀತಿಯ ಸ್ಥಾನ ಪಡೆದಿದ್ದಾರೆ. ಉತ್ತಮ ವಕೀಲನಾಗಿ ಬೆಂಗಳೂರಿನ ಕೆಎಲ್ಇ ಲಾ ಕಾಲೇಜಿನ ವಿದ್ಯಾರ್ಥಿ ಪೂರ್ಣಚಂದ್ರ ತೇಜಸ್ವಿ, ಉತ್ತಮ ವಕೀಲೆಯಾಗಿ ಬೆಂಗಳೂರಿನ ಎಮ್ಕೆಪಿಎಮ್ ಆರ್ವಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ನ ಶ್ರಿಯಾ ಶಿವರೆಡ್ಡಿ ಹೊರಹೊಮ್ಮಿದ್ದಾರೆ. ಅತ್ಯುತ್ತಮ ಮೆಮೊರಿಯಲ್ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ರಿಶಾಲ್ ಶ್ಲೈನಿ ಪೆರೇರಾ, ಡಯೇಲ್ ಪಿಂಟೊ, ನಿಕ್ಕಿ ಅಶೋಕನ್ ಅವರ ತಂಡಕ್ಕೆ ಲಭಿಸಿತು. ಉತ್ತಮ ತೀರ್ಪು ಬರವಣಿಗೆ ಸ್ಪರ್ಧೆಯಲ್ಲಿ ಮೈಸೂರಿನ ವಿದ್ಯಾವರ್ಧಕ ಲಾ ಕಾಲೇಜಿನ ವಿಭಾಲಿ.ಎಸ್.ರಾಜ್ ಪ್ರಥಮ, ಪುತ್ತೂರಿನ ವಿವೇಕಾನಂದ ಲಾ ಕಾಲೇಜಿನ ಕೀರ್ತಿ.ಕೆಆರ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಾನೂನು ರಸಪ್ರಶ್ನೆ ಸ್ಪರ್ಧೆಯಲ್ಲಿ ಮೈಸೂರಿನ ಜೆಎಸ್ಎಸ್ ಲಾ ಕಾಲೇಜಿನ ಅಬಿನಾ.ಜಿ, ಗೋಪಿಕಾ ಡಿಜೆ ಅವರ ತಂಡ ಪ್ರಥಮ ಹಾಗು ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ ಮಾನ್ಸ ಕುಮಾರನ್, ಅರ್ಪಿತಾ ಜೋಶಿ ಅವರ ತಂಡವು ದ್ವಿತೀಯ ಸ್ಥಾನ ಗಳಿಸಿತು. ”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”