ಧರ್ಮಸ್ಥಳ ಮೇಳದಲ್ಲಿ 34 ವರ್ಷ, ಕದ್ರಿ ಮೇಳದಲ್ಲಿ 6ವರ್ಷ ಭಾಗವತರಾಗಿ ಸೇವೆ

ಉಡುಪಿ: ಪಲಿಮಾರು ಮಠದ ಯತಿಶ್ರೇಷ್ಠರಾದ ಶ್ರೀ ವಿದ್ಯಾಮಾನ್ಯತೀರ್ಥರ ಹೆಸರಿನಲ್ಲಿ ಹಾಲಿ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥರು ಪ್ರತಿವರ್ಷ ನೀಡುತ್ತಿರುವ ಯಕ್ಷವಿದ್ಯಾಮಾನ್ಯ ಪ್ರಶಸ್ತಿಗೆ ಈ ಬಾರಿ ಧರ್ಮಸ್ಥಳ ಮೇಳದಲ್ಲಿ 34 ವರ್ಷ, ಕದ್ರಿ ಮೇಳದಲ್ಲಿ 6ವರ್ಷ ಭಾಗವತರಾಗಿ ಸೇವೆಸಲ್ಲಿಸಿದ ಪುತ್ತಿಗೆ ರಘುರಾಮ ಹೊಳ್ಳರನ್ನು ಆಯ್ಕೆಮಾಡಲಾಗಿದೆ. ಪ್ರಸಿದ್ಧ ಭಾಗವತರಾಗಿದ್ದ ತಮ್ಮ ತಂದೆ ಪುತ್ತಿಗೆ ರಾಮಕೃಷ್ಣ ಜೋಯಿಸರೇ ಇವರ ಆರಂಭಿಕ ಗುರುಗಳು. ಕಡತೋಕ ಮಂಜುನಾಥ ಭಾಗವತರಿಂದ ಪ್ರೇರಣೆ ಹೊಂದಿ, ಹೊಳ್ಳರು ತಮ್ಮ ವಿಶೇಷ ಕಂಠಸಿರಿಯಿಂದ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚಂಡೆ-ಮದ್ದಲೆ ವಾದನಗಳಲ್ಲೂ ಪರಿಣತಿ ಹೊಂದಿರುವ ರಘುರಾಮ ಹೊಳ್ಳರಿಗೆ ಎಪ್ರಿಲ್ 2ರ ಪೂರ್ವಾಹ್ನ 10:30ಕ್ಕೆ ಪಲಿಮಾರಿನಲ್ಲಿ ನಡೆಯಲಿರುವ ಶ್ರೀಹನುಮಜ್ಜಯಂತೀ ಮಹೋತ್ಸವದ ಪರ್ವಕಾಲದಲ್ಲಿ ಯಕ್ಷವಿದ್ಯಾಮಾನ್ಯ ಪುರಸ್ಕಾರವನ್ನು ಪ್ರಶಸ್ತಿ ಫಲಕ ಮತ್ತು 50,000 ರೂ. ಬಹುಮಾನ ನಿಧಿಯೊಂದಿಗೆ ಪ್ರದಾನ ಮಾಡಲಾಗುವುದು ಎಂದು ಪಲಿಮಾರು ಮಠದ ದಿವಾನರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”