ಪಿಪಿಸಿ ಸಂಧ್ಯಾ ಕಾಲೇಜಿನಲ್ಲಿ ಕಾರ್ಯಕ್ರಮ

ಉಡುಪಿ: ಉಡುಪಿ ಶ್ರೀಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಇತಿಹಾಸ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಇತಿಹಾಸ ಅಧ್ಯಾಪಕರ ಸಂಘ (ಮಾನುಷ)ಗಳ ಸಹಯೋಗದಲ್ಲಿ ‘ಸಂಶೋಧನಾ ಕೌಶಲ್ಯ ಮತ್ತು ಅನುಭವಾತ್ಮಕ ಅಧ್ಯಯನ’ ಕುರಿತ ವಿಶ್ವವಿದ್ಯಾನಿಲಯ ಮಟ್ಟದ ಕಾರ್ಯಾಗಾರವನ್ನು ಮಾ.26ರಂದು ಕಾಲೇಜಿನ ಎ.ವಿ. ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಗಾರವನ್ನು ಉದ್ಘಾಟಿಸಿದ ಸಂಸ್ಥೆಯ ಗೌರವ ಕಾರ್ಯದರ್ಶಿ ಸಿಎ ಟಿ.ಪ್ರಶಾಂತ್ ಹೊಳ್ಳ ಮಾತನಾಡಿ, ಕಲಿಕೆ ಎಂಬುವುದು ನಿರಂತರ ಪ್ರಕ್ರಿಯೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ಆಸಕ್ತಿಯನ್ನು ಮೂಡಿಸುವಲ್ಲಿ ಇಂತಹ ಕಾರ್ಯಗಾರಗಳು ತುಂಬಾ ಸಹಾಯಕಾರಿ ಯಾಗುತ್ತವೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರಕಾಂತ್ ಭಟ್ ಮಾತನಾಡಿ, ನಾವು ಜೀವನದಲ್ಲಿ ಯಾವುದೇ ಉನ್ನತ ಹಂತಕ್ಕೆ ತಲುಪಿದರೂ ನಮ್ಮ ಸಂಸ್ಕೃತಿ ಮತ್ತು ಇತಿಹಾಸವನ್ನು ಮರೆಯಬಾರದು ಎಂದು ತಿಳಿಸಿದರು. ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ.ರಾಘವೇಂದ್ರ ಎಲ್., ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕ ಪ್ರೇಮನಾಥ್ ಸ್ವಾಗತಿಸಿದರು. ದಾಮೋದರ್ ಶೆಟ್ಟಿಗಾರ್ ವಂದಿಸಿದರು. ವಿದ್ಯಾರ್ಥಿ ದೇವರಾಜ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಡೆದ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಕುಂದಾಪುರ ಭಂಡಾರ್ಕರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಗೋಪಾಲ್, ‘ಸಂಶೋಧನೆ: ಒಂದು ಅವಲೋಕನ’ ಎಂಬ ವಿಷಯದ ಕುರಿತು, ಶಿರ್ವದ ಮುಲ್ಕಿ ಸುಂದರರಾಮ್ ಶೆಟ್ಟಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ಪುರಾತತ್ವ ಶಾಸ್ತ್ರಜ್ಞ ಪ್ರೊ.ಟಿ.ಮುರುಗೇಶಿ ’ಕರಾವಳಿಯ ಇತಿಹಾಸದ ಸವಾಲುಗಳು ಮತ್ತು ಸಂಶೋಧನೆಯ ಅವಕಾಶಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”