ಓದುಗ ದೊರೆಗಳಿಗಾಗಿ ವಿಶೇಷ ಕಾದಂಬರಿ

ಬಾಂಬೆ: ಪ್ರೇಮ ಅದೆಷ್ಟೇ ಗಾಢವಾಗಿರಲಿ, ಪ್ರೀತಿಸಿದ ವ್ಯಕ್ತಿ ಕಣ್ಣೆದುರಿಗಿರದಿದ್ದರೆ ಮೊದಲು ಹುಟ್ಟುವುದು ವಿರಹ. ಆ ವಿರಹ ನಿಧಾನವಾಗಿ ದುಃಖವಾಗಿ, ದುಃಖವು ಭರಿಸಲಾಗದ ಒಂಟಿತನವಾಗಿ ಬದಲಾಗುತ್ತದೆ. ಕೊನೆಗೆ ಆ ಒಂಟಿತನವನ್ನು ಸಹಿಸಿಕೊಳ್ಳಲಾಗದೆ ಮನಸ್ಸು ಯಾವುದೋ ಒಂದು ಆಸರೆಗೆ ಕೈಚಾಚುತ್ತದೆ. ನಾನೀಗ ಹೇಳ ಹೊರಟಿರುವ ಕಥೆಗೂ ಈ ಮಾತುಗಳು ಬಹಳ ಹತ್ತಿರವಾಗಿವೆ. ಸಮಾಜದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಕೆಲವು ಘಟನೆಗಳು ಮಾತ್ರ ಒಂದು ಮನೆಯ ನಾಲ್ಕು ಗೋಡೆಗಳನ್ನು ದಾಟಿ ಊರಿನ ಚರ್ಚೆಯಾಗುತ್ತವೆ. ರಜತಪುರದಲ್ಲಿ ನಡೆದ ಈ ಕಥೆಯೂ ಅಂತಹದ್ದೇ. ರಜತಪುರ ಎಂಬ ಊರಲ್ಲಿ ‘ನಾಡಿನ ಗುರು’ ಎಂದು ಮೆರೆಯುತ್ತಿದ್ದ ಒಬ್ಬ ಉದ್ಯಮಿ ಇದ್ದರು. ಹಳ್ಳಿಯಿಂದ ನಗರಕ್ಕೆ ನೀರು ಹರಿಸುವ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಯನ್ನು ಸರ್ಕಾರದಿಂದ ಪಡೆದು ಉದ್ಯಮದ ಸಾಮ್ರಾಜ್ಯ ಕಟ್ಟಿಕೊಂಡಿದ್ದ ಅವರು, ಹಣ ಮತ್ತು ಅಧಿಕಾರದ ಜೊತೆಗೆ ಸಮಾಜದಲ್ಲಿ ಒಳ್ಳೆಯ ಹೆಸರನ್ನೂ ಸಂಪಾದಿಸಿಕೊಂಡಿದ್ದರು. ರಕ್ತದಾನ ಶಿಬಿರಗಳು, ಹೆಲ್ತ್ ಕಾರ್ಡ್ಗಳು, ಸರ್ಕಾರಿ ಶಾಲೆಗಳಿಗೆ ಕಟ್ಟಡಗಳು, ಸರ್ಕಾರಿ ಆಸ್ಪತ್ರೆಗೆ ನೆರವು—ಹೀಗೆ ಜನಪರ ಕೆಲಸಗಳ ಮೂಲಕ ‘ದಾನಶೂರ ಕರ್ಣ’ ಎಂಬ ಹೆಗ್ಗಳಿಕೆಯೂ ಅವರ ಪಾಲಾಗಿತ್ತು. ರಾಜಕಾರಣಿ ಯಾರೇ ಇರಲಿ, ಅಧಿಕಾರಿಯೇ ಆಗಿರಲಿ, ಯಾರನ್ನೂ ಲೆಕ್ಕಿಸದೆ ತನ್ನದೇ ಧಾಟಿಯಲ್ಲಿ ಬದುಕುತ್ತಿದ್ದ ಅವರನ್ನು ಬಹುದೊಡ್ಡ ಸಮಾಜ ದೇವರೆಂದೇ ನಂಬಿದೆ. ಅವರ ಪತ್ನಿಗೆ ಮಾತ್ರ ಜನ ನೀಡಿದ್ದ ಹೆಸರು ‘ಮಹಾಲಕ್ಷ್ಮಿ’. ಅವರ ಒಳಿತು–ಕೆಡುಕುಗಳ ಬಗ್ಗೆ ಮಾತನಾಡುವಷ್ಟು ದೊಡ್ಡವರು ನಾವಲ್ಲ ಎಂದು ಊರಿನ ಜನರೂ ಸುಮ್ಮನಾಗುತ್ತಿದ್ದರು. ಅಷ್ಟೊಂದು ಹೆಸರು, ಪ್ರತಿಷ್ಠೆ ಮತ್ತು ಪ್ರಭಾವ ಅವರಿಗಿತ್ತು. ಆದರೆ ಇದೇ ಮನೆಯೊಳಗೆ ನಡೆದ ಒಂದು ಘಟನೆ ಮಾತ್ರ ಈಗ ರಜತಪುರದ ‘ಟಾಕ್ ಆಫ್ ದಿ ಟೌನ್’ ಆಗಿದೆ. ಅದನ್ನು ಯಾರೂ ಸಂಭ್ರಮದಿಂದ ಹೇಳುತ್ತಿಲ್ಲ; ಬದಲಾಗಿ ಹೇಳುವ ಪ್ರತಿಯೊಬ್ಬರ ಮಾತಿನಲ್ಲೂ ಒಂದು ರೀತಿಯ ದುಃಖವಿದೆ. ಏಕೆಂದರೆ ಇನ್ನೇನು ಕೆಲವೇ ದಿನಗಳಲ್ಲಿ ಉದ್ಯಮಿಯ Birthday...! ಬದುಕಿನ ಕಷ್ಟ–ಸುಖ, ನೋವು–ನಲಿವು ಎಲ್ಲವನ್ನೂ ಸಮಾನವಾಗಿ ಹಂಚಿಕೊಂಡ ಪತ್ನಿ ಆಸ್ಪತ್ರೆಯ ಮಂಚದ ಮೇಲೆ ಮಲಗಿರುವುದನ್ನು ಯಾವ ಗಂಡ ತಾನೇ ಸಹಿಸಬಲ್ಲ...? ಜೀವನದ ಏಳು–ಬೀಳುಗಳಲ್ಲಿ ಹೆಗಲಿಗೆ, ಹೆಗಲು ಕೊಟ್ಟು ನಿಂತ ಮಡದಿಯನ್ನು ಆಸ್ಪತ್ರೆಯ ಮಂಚದಲ್ಲಿ ನಿಶ್ಚಲವಾಗಿ ಮಲಗಿರುವುದನ್ನು ನೋಡಿದಾಗ ಎಂಟೆದೆ ಬಂಟನ ಎದೆಯೂ ಒಮ್ಮೆ ಜರ್ಜರಿತವಾಗುತ್ತದೆ. ಆದರೆ, ತನ್ನ ಮಡದಿಯ ಇಂದಿನ ಸ್ಥಿತಿಗೆ ತಾನು ದತ್ತು ಪಡೆದು ಸಾಕಿದ ಮಗಳ ಜೀವನದಲ್ಲಿ ನಡೆದ ಬೆಳವಣಿಗೆಗಳೇ ಕಾರಣ ಎಂಬ ಸಂಗತಿ ತಿಳಿದುಬಂದಾಗ ಆ ತಂದೆಯ ಮನಸ್ಸಿನಲ್ಲಿ ಎಂತಹ ಚಂಡಮಾರುತ ಎದ್ದಿರಬಹುದು ಎಂಬುದನ್ನು ಊಹಿಸುವುದೇ ಕಷ್ಟ. ಆ ನೋವನ್ನು ವಿವರಿಸುವಾಗ 1995ರಲ್ಲಿ ತೆರೆಕಂಡ Akele Hum Akele Tum ಚಿತ್ರದ ಹಾಡಿನ ಸಾಲುಗಳು ನೆನಪಾಗುತ್ತವೆ. Majrooh Sultanpuri ಬರೆದ ಆ ಹಾಡಿನಲ್ಲಿ, ‘ನಾಳೆ ಇಡೀ ಪ್ರಪಂಚವೇ ನನ್ನ ಜೊತೆ ನಿಲ್ಲದಿದ್ದರೂ, ನನ್ನ ಜೀವನದ ದಾರಿಯಲ್ಲಿ ನನ್ನ ಜೊತೆ ನಡೆಯುವವರು ಯಾರು..?’ ಎಂಬ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಮಗುವಿನ ಉತ್ತರ—‘Daddy’. ಆದರೆ ರಜತಪುರದ ಈ ಕಥೆಯಲ್ಲಿ ಪ್ರಶ್ನೆ ಮಾತ್ರ ತಲೆಕೆಳಗಾಗಿದೆ. ತಂದೆಯ ಜೊತೆ ಕೊನೆಯವರೆಗೂ ನಿಲ್ಲಬೇಕಿದ್ದ ಆ ಮಗಳು, ತನ್ನ ತಂದೆಯ ಹುಟ್ಟುಹಬ್ಬದ ಹೊತ್ತಿಗೆ ನೀಡಿದ ಉಡುಗೊರೆ ಏನು...? ತನ್ನ ತಾಯಿಯನ್ನು ಆತ್ಮಹತ್ಯೆಯ ಅಂಚಿಗೆ ತಳ್ಳಿದು..! ಇದನ್ನು ಕಂಡು ಆ ತಂದೆಯ ಮನಸ್ಸಿನಲ್ಲಿ ಏನಾಗಿರಬಹುದು..? ತಲೆಮಾರುಗಳು ಕೂತು ತಿನ್ನುವಷ್ಟು ಆಸ್ತಿ, ಸಂಪತ್ತು, ಗೌರವ ಮತ್ತು ಪ್ರತಿಷ್ಠೆ ಆ ಕುಟುಂಬಕ್ಕಿತ್ತು. ಮಹಾಲಕ್ಷ್ಮಿಯ ಕೃಪೆಯಂತೆ ಎಲ್ಲವೂ ತುಂಬಿ ತುಳುಕುತ್ತಿದ್ದ ಆ ಮನೆಗೆ ಒಂದು ಹೆಣ್ಣುಮಗು ಬೇಕೆಂಬ ಆಸೆಯಿಂದ ದಂಪತಿ ಮಗಳನ್ನು ದತ್ತು ಪಡೆದು ಸಾಕಿದ್ದರು. ಆಕೆ ಮನೆಗೆ ಬಂದ ದಿನದಿಂದಲೇ ಅವಳ ಸಂತೋಷವೇ ಅವರ ಸಂತೋಷವಾಗಿತ್ತು. ಆಕೆಯ ಆಸೆಗಳಿಗೆ ಸಾಸಿವೆ ಕಾಳಿನಷ್ಟೂ ಕೊರತೆ ಮಾಡಲಿಲ್ಲ. ಆಕೆಯ ಹೆಸರಿನಲ್ಲೇ ಉದ್ಯಮಗಳನ್ನು ಆರಂಭಿಸಿದರು. ಭವಿಷ್ಯ ಸುಂದರವಾಗಿರಲಿ ಎಂದು ಆಕೆಗೆ ಸೂಕ್ತವೆಂದು ಭಾವಿಸಿದ ಕುಟುಂಬದ ಹುಡುಗನೊಂದಿಗೆ ವಿವಾಹ ಮಾಡಿಸಿದರು. ತಮ್ಮಿಂದ ಸಾಧ್ಯವಾದಷ್ಟು ಎಲ್ಲವನ್ನೂ ನೀಡಿ, ಮಗಳ ಬದುಕು ನೆಮ್ಮದಿಯಾಗಿರಲಿ ಎಂಬುದೇ ಆ ತಂದೆ–ತಾಯಿಯ ಆಶಯವಾಗಿತ್ತು. ಆದರೆ ಮನುಷ್ಯನ ಮನಸ್ಸಿಗೆ ಮಾತ್ರ ಲೆಕ್ಕಾಚಾರವಿಲ್ಲ. ಬದುಕಿನಲ್ಲಿ ಯಾವ ಕ್ಷಣದಲ್ಲಿ ಯಾರ ಮೇಲೆ ಒಲವು ಮೂಡುತ್ತದೆ, ಆ ಒಲವು ಯಾವಾಗ ಪ್ರೀತಿಯಾಗಿ ಬದಲಾಗುತ್ತದೆ, ಆ ಪ್ರೀತಿ ಯಾವ ಹಂತದಲ್ಲಿ ಉಳಿದ ಸಂಬಂಧಗಳನ್ನೇ ಪ್ರಶ್ನಿಸುವಷ್ಟು ಗಾಢವಾಗುತ್ತದೆ ಎಂಬುದನ್ನು ಯಾರೂ ಹೇಳಲು ಸಾಧ್ಯವಿಲ್ಲ. ರಜತಪುರದ ಮತ್ತೊಬ್ಬ ಖ್ಯಾತ ಉದ್ಯಮಿಯ ಮಗನ ಮೇಲೆ ಆಕೆಗೆ ಒಲವು ಮೂಡಿತು ಎಂಬ ಮಾತುಗಳು ನಿಧಾನವಾಗಿ ಹೊರಬಂದವು. ಅದು ನಿಜವಾದ ಪ್ರೀತಿಯೋ, ಕ್ಷಣಿಕ ಆಕರ್ಷಣೆಯೋ, ಅಥವಾ ತನ್ನ ಬದುಕಿನ ಯಾವುದೋ ಶೂನ್ಯತೆಯನ್ನು ತುಂಬಿಕೊಳ್ಳಲು ಮನಸ್ಸು ಹುಡುಕಿದ ಆಸರೆಯೋ—ಉತ್ತರ ಇನ್ನೂ ಸ್ಪಷ್ಟವಾಗಿರಲಿಲ್ಲ. ಆದರೆ ಈ ಕಥೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದ ಸಂಗತಿ ಒಂದಿತ್ತು. ಆ ವ್ಯಕ್ತಿ ಈಗಾಗಲೇ ವಿವಾಹಿತನಾಗಿದ್ದ. ಅವನ ಪತ್ನಿಯೂ ಸಾಮಾನ್ಯ ಮಹಿಳೆಯಾಗಿರಲಿಲ್ಲ. ಸೌಂದರ್ಯದಲ್ಲಿ ಯಾವುದೇ ಬಾಲಿವುಡ್ ನಟಿಗೂ ಕಡಿಮೆಯಿಲ್ಲದವಳು ಎಂದು ಹೇಳುವಷ್ಟು ಆಕರ್ಷಕ ವ್ಯಕ್ತಿತ್ವ. ಸಮಾಜದ ಕಣ್ಣಲ್ಲಿ ಗೌರವಾನ್ವಿತ ಕುಟುಂಬ. ಹೀಗಿರುವಾಗ ಈ ಹೊಸ ಸಂಬಂಧದ ಹಿಂದೆ ನಿಜವಾದ ಪ್ರೀತಿ ಇತ್ತೇ? ಅಥವಾ ಆಕೆಯ ಹಿಂದೆ ಇರುವ ಹಣ, ಆಸ್ತಿ ಮತ್ತು ಪ್ರಭಾವದ ಮೇಲಿನ ಆಸೆಯೇ ಕಾರಣವಾಗಿತ್ತೇ? ಈ ಪ್ರಶ್ನೆಗೆ ಉತ್ತರ ನೀಡುವುದು ಸುಲಭವಲ್ಲ. ಏಕೆಂದರೆ ಪ್ರೀತಿಯ ಮುಖವಾಡದ ಹಿಂದೆ ನಿಜವಾಗಿ ಏನಿದೆ ಎಂಬುದು ಕೆಲವೊಮ್ಮೆ ಪ್ರೀತಿಸಿದವರಿಗೂ ತಿಳಿಯುವುದಿಲ್ಲ. ಆದರೆ ಒಂದು ಕುಟುಂಬದ ನೆಮ್ಮದಿ ಮಾತ್ರ ನಿಧಾನವಾಗಿ ಕೈತಪ್ಪುತ್ತಿತ್ತು. ತಂದೆ–ತಾಯಿ ತಮ್ಮ ಬದುಕಿನ ಎಲ್ಲವನ್ನೂ ಕೊಟ್ಟು ಬೆಳೆಸಿದ ಮಗಳು ಒಂದು ಕಡೆ; ಬದುಕಿನ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ತನ್ನೊಂದಿಗೆ ನಡೆದ ಪತ್ನಿ ಮತ್ತೊಂದು ಕಡೆ. ಮಧ್ಯದಲ್ಲಿ ನಿಂತಿದ್ದ ತಂದೆಗೆ ಯಾವ ದಾರಿ ಸರಿಯೆಂಬುದೇ ಅರ್ಥವಾಗದ ಸ್ಥಿತಿ. ಹೊರಗೆ ನೋಡಿದರೆ ಅದು ಹಣ, ಅಧಿಕಾರ ಮತ್ತು ಪ್ರತಿಷ್ಠೆಯಿಂದ ತುಂಬಿದ ಕುಟುಂಬ. ಆದರೆ ಮನೆಯ ಬಾಗಿಲು ಮುಚ್ಚಿದ ಮೇಲೆ ಅಲ್ಲೊಂದು ತಂದೆಯ ಅಸಹಾಯಕತೆ, ತಾಯಿಯ ನೋವು ಮತ್ತು ಮಗಳ ನಿರ್ಧಾರಗಳ ನಡುವೆ ಸಿಲುಕಿದ ಒಂದು ಕುಟುಂಬದ ಕಥೆ ಬರೆಯಲ್ಪಡುತ್ತಿತ್ತು. ಬಹುಶಃ ಆ ಮಗಳ ಮನಸ್ಸಿನಲ್ಲಿದ್ದ ಸತ್ಯ ಆಕೆಗೆ ಮಾತ್ರ ಗೊತ್ತಿರಬಹುದು. ಬಹುಶಃ ಆ ಉದ್ಯಮಿಯ ಮಗನ ಮನಸ್ಸಿನಲ್ಲಿದ್ದ ಸತ್ಯ ಅವನಿಗೇ ಗೊತ್ತಿರಬಹುದು. ಅಥವಾ ಈ ಸಂಬಂಧದ ನಿಜವಾದ ಮುಖವನ್ನು ದೇವರೇ ತಿಳಿದಿರಬಹುದು. ಅದರ ಉತ್ತರ... ಬಹುಶಃ ಜೀಸಸ್ಗೇ ಗೊತ್ತಿರಬಹುದು. ಆದರೆ ರಜತಪುರದ ಜನರ ಮನಸ್ಸಿನಲ್ಲಿ ಉಳಿದಿರುವ ಪ್ರಶ್ನೆ ಮಾತ್ರ ಒಂದೇ—ತನ್ನ ಮಗಳಿಗಾಗಿ ಬದುಕಿನ ಬಾಗಿಲುಗಳನ್ನು ತೆರೆದಿಟ್ಟಿದ್ದ ಆ ತಂದೆಯ ಮನೆಯ ಬಾಗಿಲು ಯಾವ ಕ್ಷಣದಲ್ಲಿ ಮುಚ್ಚಿತು..?
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”