ನೆಟ್ಫ್ಲಿಕ್ಸ್ನಲ್ಲಿ ಇದೆ ಅದ್ಬುತ ಸಿನೆಮಾ

ಬಾಂಬೆ: ಮುಸಾಫಿರ್ ಕೆಫೆ..! ಸುಧಾ ಮತ್ತು ಚಂದರ್ ಜೋಡಿಯ ಪ್ರೀತಿಯ ಸಂಕೇತವಾಗಿ ಮಸೂರಿಯ ಸುಂದರ ಪರ್ವತಗಳ ನಡುವೆ ಹುಟ್ಟಿಕೊಂಡ ಒಂದು ಕನಸು. ಕೆಫೆ ಪ್ರಸಿದ್ಧವಾಗುತ್ತದೆ. ಆದರೆ ಅದರ ಗೋಡೆಗಳ ನಡುವೆ ಉಳಿದುಕೊಂಡಿದ್ದು ಕೇವಲ ಕಾಫಿಯ ಪರಿಮಳವಲ್ಲ; ಎರಡು ಹೃದಯಗಳ ಅಪೂರ್ಣ ಪ್ರೀತಿ, ನೆನಪುಗಳು ಮತ್ತು ವಿರಹದ ನೋವು. ಚಂದರ್, ಸುಧಾ ಮತ್ತು ಪ್ರೀತಿಯ ಭಾವನಾತ್ಮಕ ಪಯಣವೇ ಎಂಟು ಎಪಿಸೋಡ್ಗಳ ‘ಮುಸಾಫಿರ್ ಕೆಫೆ’ಯನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ. ಬೋಪಾಲ್ನಲ್ಲಿ ವಕೀಲೆಯಾಗಿದ್ದ ಸುಧಾ ಹಾಗೂ ಅಮೇರಿಕಾದಲ್ಲಿ ಇಂಜಿನಿಯರ್ ಕೆಲಸಬಿಟ್ಟು ಪಿಡಬ್ಲ್ಯೂಡಿಯಲ್ಲಿ ಕೆಲಸ ಮಾಡುತ್ತಿದ್ದ ಚಂದರ್. ಇಬ್ಬರು ತಮಗೆ ಅರಿವಿಲ್ಲದಂತೆ ಹಲಸಿನ ಹಣ್ಣಿನ ತೊಳೆಗಳ ನಡುವೆ ಇರುವ ಮೇಣದಂತೆ ಅಂಟಿಕೊಳ್ಳುತ್ತಾರೆ. ಪ್ರೀತಿ ಹುಟ್ಟುತ್ತದೆ. ಜೋಡಿ ಹಕ್ಕಿಗಳಂತೆ ತಮ್ಮದೇ ಲೋಕದಲ್ಲಿ ಹಾರಾಡುತ್ತಿದ್ದ ಅವರಿಗೆ ಕನಸುಗಳು ಅಚಲವಾಗಿದ್ದವು. ಚಂದರ್ಗೊಂದು ಕೆಫೆ ಆರಂಭಿಸುವ ಕನಸು. ಆ ಕನಸಿಗೆ ಸುಧಾ ನೀರೆರೆಯುತ್ತಾಳೆ. ತನ್ನ ಮೊದಲ ಪ್ರೀತಿಯ ನೆನಪಿನಲ್ಲೇ ಕೆಫೆಗೆ ‘ಮುಸಾಫಿರ್ ಕೆಫೆ’ ಎಂಬ ಹೆಸರನ್ನಿಡುತ್ತಾಳೆ. ಇತ್ತ ಸುಧಾಳ ಕನಸು ಇನ್ನೂ ದೊಡ್ಡದು. ಬಾಂಬೆಯಲ್ಲಿ ತನ್ನದೇ ಆದ ದೊಡ್ಡ ‘ಲಾ’ ಸಂಸ್ಥೆ ಆರಂಭಿಸಬೇಕು ಎಂಬ ಆಕೆಯ ಆಸೆಗೆ ಸಾಥ್ ನೀಡಲು ಚಂದರ್ ತನ್ನ ಕೆಲಸಕ್ಕೆ ರಾಜೀನಾಮೆ ನೀಡಲು ಸಿದ್ಧನಾಗುತ್ತಾನೆ. ಆದರೆ ಇದೇ ಅವರ ಪ್ರೀತಿಯ ಕಥೆಯ ದೊಡ್ಡ ತಿರುವು. “ನನಗಾಗಿ ನೀನು ನಿನ್ನ ಕನಸುಗಳನ್ನು ತ್ಯಾಗ ಮಾಡಬೇಡ...” ಎಂಬ ಸುಧಾಳ ಮಾತು ಚಂದರ್ನ ಹೃದಯವನ್ನು ಒಡೆಯುತ್ತದೆ. ಪ್ರೀತಿಯನ್ನು ಕಳೆದುಕೊಳ್ಳುವ ನೋವಿದ್ದರೂ, ಪ್ರೀತಿಸುವ ವ್ಯಕ್ತಿಯ ಕನಸುಗಳನ್ನು ಕಸಿದುಕೊಳ್ಳಬಾರದು ಎಂಬ ತ್ಯಾಗದ ನಿರ್ಧಾರವನ್ನು ಸುಧಾ ತೆಗೆದುಕೊಳ್ಳುತ್ತಾಳೆ. ಇಬ್ಬರೂ ದೂರವಾಗುತ್ತಾರೆ. ಕಾಲ ಯಾರನ್ನೂ ಕಾಯುವುದಿಲ್ಲ. ಎಂಟು ವರ್ಷಗಳು ಕಳೆದುಹೋಗುತ್ತವೆ. ಚಂದರ್ ಮಸೂರಿಗೆ ಬಂದು ತನ್ನ ಮೊದಲ ಪ್ರೇಯಸಿ ಸುಧಾ ಇಷ್ಟಪಟ್ಟಂತೆ **‘ಮುಸಾಫಿರ್ ಕೆಫೆ’**ಯನ್ನು ನಿರ್ಮಿಸುತ್ತಾನೆ. ಕೆಫೆಯ ಪ್ರತಿಯೊಂದು ಮೂಲೆಯಲ್ಲೂ ಸುಧಾಳ ನೆನಪು. ಅವಳು ಒಮ್ಮೆ ಹೇಳಿದ ಮಾತುಗಳು, ಅವಳ ಕನಸುಗಳು, ಅವರಿಬ್ಬರು ಹಂಚಿಕೊಂಡ ಕ್ಷಣಗಳು—ಎಲ್ಲವೂ ಆ ಕೆಫೆಯೊಳಗೆ ಜೀವಂತವಾಗಿರುತ್ತವೆ. ಈ ಬದುಕಿನ ಪಯಣದಲ್ಲಿ ಚಂದರ್ಗೆ ಜೊತೆಯಾಗುವವಳು ಪ್ರೀತಿ. ಚಂದರ್ನನ್ನು ಪ್ರೀತಿಸುವ ಪ್ರೀತಿ, ಅವನ ಹೃದಯದ ಒಂದು ಭಾಗದಲ್ಲಿ ಇನ್ನೂ ಸುಧಾ ಜೀವಂತವಾಗಿದ್ದಾಳೆ ಎಂಬ ಸತ್ಯವನ್ನು ಅರಿತಿದ್ದಾಳೆ. ತನ್ನ ಪ್ರೀತಿಯನ್ನು ಪಡೆಯುವ ಆಸೆಯ ಜೊತೆಗೆ, ಚಂದರ್ನ ಹಳೆಯ ಪ್ರೀತಿಯನ್ನು ಕಳೆದುಕೊಳ್ಳುವ ಭಯವೂ ಆಕೆಯನ್ನು ಕಾಡುತ್ತದೆ. ಚಂದರ್ ತನ್ನ ಜೊತೆ ಇದ್ದರೂ, ಅವನ ಹೃದಯದ ಒಂದು ಮೂಲೆಯಲ್ಲಿ ಇನ್ನೊಬ್ಬಳಿದ್ದಾಳೆ ಎಂಬ ನೋವು—ಪ್ರೀತಿಯ ಐದು ವರ್ಷಗಳ ಬದುಕನ್ನು ವಿರಹದ ಆತಂಕವಾಗಿ ಕಾಡುತ್ತದೆ. ಆಮೇಲೆ ಸುಧಾ ಮತ್ತೆ ಬರುತ್ತಾಳೆ. ಪ್ರೀತಿಯೇ ಚಂದರ್ನನ್ನು ಭೇಟಿಯಾಗುವಂತೆ ಸುಧಾಳನ್ನು ಕೇಳಿಕೊಳ್ಳುತ್ತಾಳೆ. ಎಂಟು ವರ್ಷಗಳ ಬಳಿಕ ಮಸೂರಿಯ ಪರ್ವತಗಳ ನಡುವೆ ಮತ್ತೆ ಎದುರಾಗುವ ಸುಧಾ ಮತ್ತು ಚಂದರ್. ಮಾತಿಗಿಂತ ಮೌನವೇ ಹೆಚ್ಚು ಮಾತನಾಡುತ್ತದೆ. ಹಳೆಯ ನೆನಪುಗಳು ಮತ್ತೆ ಕಣ್ಣುಮುಂದೆ ಬರುತ್ತವೆ. ಒಮ್ಮೆ ಕೈ ಹಿಡಿದು ನಡೆದ ದಾರಿಗಳಲ್ಲಿ ಮತ್ತೆ ಹೆಜ್ಜೆ ಹಾಕುತ್ತಾರೆ. ಪ್ರೀತಿ ಇನ್ನೂ ಸತ್ತಿಲ್ಲ. ಆದರೆ ಸಮಯ ಬದಲಾಗಿದೆ. ಇತ್ತ ಸುಧಾಳ ಜೀವನದಲ್ಲೂ ವಿನೀತ್ ಇದ್ದಾನೆ. ಚಂದರ್ನ ಜೀವನದಲ್ಲೂ ಪ್ರೀತಿ ಇದ್ದಾಳೆ. ಹೀಗಾಗಿ ಇದು ಕೇವಲ “ಯಾರನ್ನು ಪ್ರೀತಿಸುತ್ತಾರೆ?” ಎಂಬ ಪ್ರಶ್ನೆಯ ಕಥೆಯಲ್ಲ. ಇದು “ಯಾರಿಗಾಗಿ ನಾವು ಏನನ್ನು ತ್ಯಾಗ ಮಾಡುತ್ತೇವೆ?” ಎಂಬ ಪ್ರಶ್ನೆಯ ಕಥೆ. ಸುಧಾ ಮತ್ತು ಚಂದರ್ರ ಪ್ರೀತಿ ಒಟ್ಟಾಗಿ ಬದುಕಲು ಸಾಧ್ಯವಾಗದಿದ್ದರೂ, ಒಬ್ಬರ ಬದುಕಿನಲ್ಲಿ ಮತ್ತೊಬ್ಬರು ಶಾಶ್ವತ ನೆನಪಾಗಿ ಉಳಿಯುತ್ತಾರೆ. ಪ್ರೀತಿ ಚಂದರ್ನೊಂದಿಗೆ ಇದ್ದರೂ, ಅವನ ಹೃದಯದ ಹಳೆಯ ಪುಟಗಳನ್ನು ಅಳಿಸಲು ಸಾಧ್ಯವಾಗುವುದಿಲ್ಲ. ವಿನೀತ್ ಸುಧಾಳ ಬದುಕಿನಲ್ಲಿ ಬಂದರೂ, ಚಂದರ್ನ ನೆನಪುಗಳನ್ನು ಸಂಪೂರ್ಣವಾಗಿ ಅಳಿಸಲು ಸಾಧ್ಯವಾಗುವುದಿಲ್ಲ. ಕೆಲವು ಪ್ರೇಮಗಳು ಮದುವೆಯಲ್ಲಿ ಮುಗಿಯುವುದಿಲ್ಲ. ಕೆಲವು ಪ್ರೇಮಗಳು ಜೊತೆಯಾಗಿ ನಡೆಯುವುದಿಲ್ಲ. ಆದರೆ ಅವು ನಮ್ಮೊಳಗೆ ಎಂದಿಗೂ ಮುಗಿಯುವುದಿಲ್ಲ. ‘ಮುಸಾಫಿರ್ ಕೆಫೆ’ಯ ವಿಶೇಷತೆಯೇ ಇದು. ಮಸೂರಿಯ ಪರ್ವತಗಳಷ್ಟು ಸುಂದರವಾಗಿ ಪ್ರೀತಿಯನ್ನು ತೋರಿಸುವ ಈ ಕಥೆ, ಅದೇ ಪರ್ವತಗಳ ನಡುವೆ ವಿರಹದ ನೋವನ್ನೂ ಕಟ್ಟಿಕೊಡುತ್ತದೆ. ಒಂದು ಕಡೆ ಮೊದಲ ಪ್ರೀತಿಯ ಸಿಹಿ ನೆನಪು, ಮತ್ತೊಂದು ಕಡೆ ಜೊತೆಗಿರುವ ವ್ಯಕ್ತಿಯ ಮೇಲಿನ ಪ್ರೀತಿ—ಈ ಎರಡರ ನಡುವೆ ಸಿಲುಕುವ ಮೂರು ಹೃದಯಗಳ ಕಥೆ ಇದು. ದಿವ್ಯಾ ಪ್ರಕಾಶ್ ದುಬೆ ಅವರ ಪ್ರಸಿದ್ಧ ಕಾದಂಬರಿಯಿಂದ ಆಯ್ದುಕೊಂಡಿರುವ ಈ ಕಥೆಯನ್ನು ತೆರೆಯ ಮೇಲೆ ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. ಪ್ರೀತಿ ಯಾವಾಗಲೂ ಪಡೆಯುವುದರ ಹೆಸರಲ್ಲ; ಕೆಲವೊಮ್ಮೆ ಪ್ರೀತಿಸುವ ವ್ಯಕ್ತಿಯ ಸಂತೋಷಕ್ಕಾಗಿ ಹಿಂದೆ ಸರಿಯುವುದೂ ಪ್ರೀತಿಯೇ ಎಂಬುದನ್ನು ‘ಮುಸಾಫಿರ್ ಕೆಫೆ’ ಹೇಳುತ್ತದೆ. ಎಂಟು ಎಪಿಸೋಡ್ಗಳ ಪಯಣದಲ್ಲಿ ಪ್ರೇಕ್ಷಕನಿಗೆ ನಿಧಾನವಾಗಿ ಅರಿವಾಗುವುದು ಒಂದೇ ಒಂದು ಸತ್ಯ— ಕೆಲವು ಪ್ರೇಮಿಗಳು ನಮ್ಮ ಬದುಕಿನಲ್ಲಿ ಉಳಿಯುವುದಿಲ್ಲ... ಆದರೆ ಅವರ ನೆನಪುಗಳು ನಮ್ಮ ಬದುಕಿನಿಂದ ಎಂದಿಗೂ ಹೊರಡುವುದಿಲ್ಲ. ‘ಮುಸಾಫಿರ್ ಕೆಫೆ’ ಮುಗಿಯುವ ಹೊತ್ತಿಗೆ ಕಥೆ ಮುಗಿದಂತೆ ಅನಿಸುವುದಿಲ್ಲ. ಬದಲಾಗಿ, ಚಂದರ್–ಸುಧಾಳ ಅಪೂರ್ಣ ಪ್ರೀತಿಯಂತೆ ಒಂದು ಪ್ರಶ್ನೆ ಮನಸ್ಸಿನಲ್ಲಿ ಉಳಿಯುತ್ತದೆ. ಪ್ರೀತಿ ಎಂದರೆ ಜೊತೆಯಾಗಿರುವುದೇ... ಅಥವಾ ದೂರವಿದ್ದರೂ ಒಬ್ಬರಿಗೊಬ್ಬರು ಸಂತೋಷವಾಗಿರಲಿ ಎಂದು ಬಯಸುವುದೇ? ಉತ್ತರ ಹುಡುಕುವಷ್ಟರಲ್ಲಿ ಕಣ್ಣುಗಳು ತೇವವಾಗಿರುತ್ತವೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”