ಬೆಂಗಳೂರಿನ ಜನರಲ್ ಅಟಾನಮಿ ಅಭಿವೃದ್ಧಿಪಡಿಸಿದ 'ಪರಮ್' ಭಾರತದ ಮೊದಲ ಸ್ವದೇಶಿ ರೋಬೋಟಿಕ್ ನಾಯಿ. ಇಂಡಿಯಾ ಎಐ ಎಕ್ಸ್ಪೋದಲ್ಲಿ ಅನಾವರಣಗೊಂಡ ಈ ರೋಬೋಟ್, ಸಂಪೂರ್ಣ ಭಾರತೀಯ ವಿನ್ಯಾಸ ಮತ್ತು ನಿರ್ಮಾಣವಾಗಿದೆ. ಸ್ವತಂತ್ರವಾಗಿ ಸಂಚರಿಸುವ, ಅಡೆತಡೆಗಳನ್ನು ನಿವಾರಿಸುವ, ಮತ್ತು ಮೆಟ್ಟಿಲು ಹತ್ತುವ ಸಾಮರ್ಥ್ಯ ಹೊಂದಿದೆ. ಗಡಿ ಭದ್ರತೆ, ಅಪಾಯಕಾರಿ ಪ್ರದೇಶಗಳ ರಕ್ಷಣೆ, ಮತ್ತು ಕೈಗಾರಿಕಾ ತಪಾಸಣೆಗೆ ಇದು ಉಪಯುಕ್ತ. ಭಾರತೀಯ ರೋಬೋಟಿಕ್ಸ್ ತಂತ್ರಜ್ಞಾನದ ಪ್ರಗತಿಗೆ ಇದು ಉತ್ತಮ ನಿದರ್ಶನವಾಗಿದೆ.
ಬೆಂಗಳೂರು ಮೂಲದ ರೋಬೋಟಿಕ್ಸ್ ಸ್ಟಾರ್ಟ್-ಅಪ್ ‘ಜನರಲ್ ಅಟಾನಮಿ’ (General Autonomy) ಅಭಿವೃದ್ಧಿಪಡಿಸಿರುವ ಭಾರತದ ಮೊದಲ ಸ್ವದೇಶಿ ನಿರ್ಮಿತ ರೋಬೋಟಿಕ್ ನಾಯಿ ‘ಪರಮ್’ (Param) ಸುದ್ದಿಯಲ್ಲಿದೆ. ದೆಹಲಿಯಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್ಪೋ 2026’ ರಲ್ಲಿ ಇದನ್ನು ಅನಾವರಣಗೊಳಿಸಲಾಗಿದೆ. ಕಂಪನಿಯು ಪರಮ್ ಅನ್ನು “ಭಾರತದ ಅತ್ಯಂತ ಶಕ್ತಿಶಾಲಿ ಸ್ಥಳೀಯ ರೋಬೋಟ್ ನಾಯಿ” ಎಂದು ಬಣ್ಣಿಸಿದೆ. ‘ಪರಮ್’ ಕೇವಲ ಭಾರತದಲ್ಲಿ ಜೋಡಿಸಲಾದ ಯಂತ್ರವಲ್ಲ, ಬದಲಿಗೆ ಭಾರತೀಯ ಇಂಜಿನಿಯರ್ಗಳು ಮೊದಲಿನಿಂದಲೂ ವಿನ್ಯಾಸಗೊಳಿಸಿ ನಿರ್ಮಿಸಿರುವ ಸಂಪೂರ್ಣ ಸ್ವದೇಶಿ ರೋಬೋಟ್ ಆಗಿದೆ. ಈ ಯೋಜನೆಯನ್ನು ಕೇವಲ 7 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ. ಈ ಹಿಂದೆ ಹ್ಯೂಮನಾಯ್ಡ್ ರೋಬೋಟ್ ನಿರ್ಮಿಸಿದ ಮಾದರಿಯನ್ನು ತಂಡವು ಇಲ್ಲಿ ಬಳಸಿಕೊಂಡಿದ್ದು, ಈ ರೋಬೋಟ್ ಅದ್ಭುತ ಸಾಮರ್ಥ್ಯಗಳನ್ನು ಕೂಡ ಹೊಂದಿದೆ. ಇದು ಸ್ವತಂತ್ರವಾಗಿ ಸಂಚರಿಸಬಲ್ಲದು, ದಾರಿ ಮಧ್ಯೆ ಬರುವ ಅಡೆತಡೆಗಳನ್ನು ಗುರುತಿಸಿ ತನ್ನ ಹಾದಿಯನ್ನು ಬದಲಿಸಿಕೊಳ್ಳುತ್ತದೆ. ಇದು 30 ಸೆಂಟಿಮೀಟರ್ ಎತ್ತರದ ಮೆಟ್ಟಿಲುಗಳನ್ನು ಹತ್ತಬಲ್ಲದು. ಕಡಿಮೆ ಎತ್ತರದ ಜಾಗಗಳಲ್ಲಿ ‘ಏಡಿ ನಡಿಗೆ’ಯಂತೆ (Crab walk) ಸಾಗುತ್ತದೆ. ಕೆಳಗೆ ಬಿದ್ದರೆ ತಾನಾಗಿಯೇ ಎದ್ದು ನಿಲ್ಲುವ ಸಾಮರ್ಥ್ಯವನ್ನು ಕೂಡ ಹೊಂದಿದೆ.

ಸ್ಟಾರ್ಟ್-ಅಪ್ ಇಂಡಿಯಾದ 10 ವರ್ಷಗಳ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದನ್ನು ಪ್ರದರ್ಶಿಸಲಾಗಿತ್ತು. ಈ ವೇಳೆ ಪ್ರಧಾನಿಯವರು ರೋಬೋಟ್ನ ಕಾರ್ಯಕ್ಷಮತೆಯನ್ನು ಮೆಚ್ಚಿಕೊಂಡಿದ್ದರು. ಇಂತಹ ರೋಬೋಟ್ಗಳು ಮುಖ್ಯವಾಗಿ ಕಾರ್ಖಾನೆಗಳ ತಪಾಸಣೆ, ಅಪಾಯಕಾರಿ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ, ಗಡಿ ಭದ್ರತೆ ಮತ್ತು ಸಂಶೋಧನಾ ಯೋಜನೆಗಳಿಗೆ ಸಹಕಾರಿಯಾಗಲಿವೆ. ಬೆಂಗಳೂರು ಮೂಲದ ಈ ಸಂಸ್ಥೆಯು ಚೀನಾದ ರೋಬೋಟ್ಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಈ ಸಾಧನೆ ಮಾಡಿದೆ. ಭಾರತೀಯ ರೊಬೊಟಿಕ್ಸ್ ತಂತ್ರಜ್ಞಾನವು ಹೇಗೆ ಬೆಳೆಯುತ್ತಿದೆ ಮತ್ತು ಜಾಗತಿಕವಾಗಿ ಸ್ಪರ್ಧಿಸುವ ಗುರಿಯನ್ನು ಹೊಂದಿದೆ ಎಂಬುದನ್ನು ಪರಮ್ ತೋರಿಸುತ್ತದೆ.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”