ಮೂರು ಬಾರಿಯ ಉಡುಪಿ ಶಾಸಕರಿಂದ ಪ್ರತಿಭಟನೆ..!

ಉಡುಪಿ: ರೆಸಾರ್ಟ್ ಮಾಡಲೆಂದು ತಾಲೂಕಿನ ಬಡಾನಿಡಿಯೂರು ಗ್ರಾಮದ ಸರ್ವೇ ನಂಬರ್ 118/2ಎ1ಎ3 ಮತ್ತು 118/2ಬಿ ಯ 0.90 ಎಕರೆ ಜಾಗದ ಏಕವಿನ್ಯಾಸ ( ಸಿಂಗಲ್ ಲೇ-ಔಟ್) ಗೆ ಸಲ್ಲಿಸಿದ ಅರ್ಜಿಯನ್ನು ನಗರಾಭಿವೃದ್ದಿ ಪ್ರಾಧಿಕಾರವು 2 ವರ್ಷವಾದರೂ ಅನುಮತಿ ನೀಡದೇ ಇರುವುದನ್ನು ವಿರೋಧಿಸಿ ಮಾಜಿ ಶಾಸಕ ರಘುಪತಿ ಭಟ್ ಪ್ರಾಧಿಕಾರದ ಆವರಣದೊಳಗೆ ಸೋಮವಾರ ಧರಣಿ ಕುಳಿತಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಹೇಶ್ ಆಗಮಿಸಿ, ಮಾಜಿ ಶಾಸಕ ರಘುಪತಿ ಭಟ್ ಅವರನ್ನು ವಿಶ್ವಾಸಕ್ಕೆ ಪಡೆಯಲು ಪ್ರಯತ್ನಿಸಿದರು. ಈ ವೇಳೆ ಮಾಜಿ ಶಾಸಕ ರಘುಪತಿ ಭಟ್ ಅವರು, ನಾನು ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಈ ಹಿಂದೆ ನಗರಸಭೆಯ ಕಮೀಷನರ್ ವಿರುದ್ದ ಶವಯಾತ್ರೆ ಮಾಡಿದ್ದೆ. ಈಗಲೂ ಅಂತಹ ಪ್ರತಿಭಟನೆ ಮಾಡಲು ತಿಳಿದಿದೆ ಎಂದು ಗದರಿಸಿದರು. ಹಿರಿಯ ಅಧಿಕಾರಿಗಳು, ಹೈಕೋರ್ಟಿನ ಆದೇಶಕ್ಕೂ ತಾವು ಬೆಲೆ ಕೊಟ್ಟಿಲ್ಲ, ನನಗೆ ಸಿಂಗಲ್ ಲೇ-ಔಟ್ ಕೊಡಿ ಅಥವಾ ಹಿಂಬರಹ ನೀಡಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಒಂದು ದಿನದ ಕಾಲವಕಾಶವನ್ನು ಕೇಳಿದರು. ಕಾಂಗ್ರೆಸ್ ಮುಖಂಡ ನಾಗೇಂದ್ರ ಪುತ್ರನ್, ಧಾರ್ಮಿಕ ಮುಖಂಡರಾದ ಮಹೇಶ್ ಠಾಕೂರ್, ಪ್ರಕಾಶ್ ಕುಕ್ಕೆಹಳ್ಳಿ, ಬಿಜೆಪಿ ಮುಖಂಡ ಸುವರ್ಧನ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”