ಉಡುಪಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಸದ ಕೋಟ

ಉಡುಪಿ: ಪಿಬಿ ಜಿ ರಾಮ್ ಜಿ ಕಾಯಿದೆ ಕುರಿತು ಟೀಕಿಸಿ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ರಾಜ್ಯದ ಎಲ್ಲ ಪಂಚಾಯತ್ ಸದಸ್ಯರಿಗೆ ಪತ್ರ ಬರೆದಿದ್ದು, ಅದಕ್ಕೆ ಪ್ರತಿಯಾಗಿ ಅದರಲ್ಲಿನ ಎಲ್ಲ ಆರೋಪ ಗಳಿಗೆ ಉತ್ತರವಾಗಿ ನಾನು ಕೂಡ ಗ್ರಾಪಂ ಸದಸ್ಯರು ಹಾಗೂ ರಾಜ್ಯದ ಸಂಸದರುಗಳಿಗೆ ಪತ್ರ ಬರೆದಿದ್ದೇನೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರ ಪತ್ರ ಸತ್ಯಕ್ಕೆ ದೂರವಾದ ಮಾಹಿತಿಯನ್ನು ಒದಗಿಸುತ್ತಿದ್ದು, ಈ ಯೋಜನೆ ಬಗ್ಗೆ ಸುಳ್ಳು ಮತ್ತು ಅಪಪ್ರಚಾರದ ಹೇಳಿಕೆ ನೀಡಿ ಜನರನ್ನು ಮತ್ತು ಸ್ಥಳೀಯ ಆಡಳಿತದ ಜನಪ್ರತಿನಿಧಿಗಳನ್ನು ತಪ್ಪಿ ದಾರಿಗೆ ಎಳೆಯುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಯೋಜನೆಯ ಉದ್ಯೋಗಿಗಳಿಗೆ ಮತ್ತು ಜನಪ್ರತಿನಿಧಿ ಗಳಿಗೆ ವಿಬಿ ಜಿ ರಾಮ್ ಜಿ ಕಾಯಿದೆ ಬಗ್ಗೆ ವಾಸ್ತವಿಕತೆಯನ್ನು ತಿಳಿಸುವುದು ನಾನು ಪತ್ರ ಬರೆದಿದ್ದೇನೆ ಎಂದರು. ಈ ಕಾಯಿದೆಯನ್ನು ಯಾವುದೇ ಚರ್ಚೆ ಮಾಡದೆ ಸರ್ವಾಧಿಕಾರದಿಂದ ಅನುಮೋದನೆ ಮಾಡಲಾಗಿದೆ ಎಂಬ ಆರೋಪ ಸುಳ್ಳು. ಈ ಕಾಯಿದೆಯನ್ನು ಚರ್ಚಿಸಿಯೇ ಬಹುಮತದಿಂದ ಅನುಷ್ಠಾನಗೊಂಡಿದೆ. ನೂತನ ಕಾಯಿದೆ ಯಲ್ಲಿ ಈಗ ಗ್ರಾಪಂಗಳು ಮತ್ತು ಗ್ರಾಮಸಭೆಗಳಿಗೆ ಇರುವ ಅಧಿಕಾರವನ್ನು ಕಿತ್ತುಕೊಳ್ಳದೆ ಮೊದಲಿನಂತೆ ಉಳಿಸಲಾಗಿದೆ. ಇದರಲ್ಲಿ ಯಾವ ಬದಲಾವಣೆ ಕೂಡ ಮಾಡಿಲ್ಲ. ರಾಜ್ಯ ಸರಕಾರ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರ ವಾದುದು ಎಂದು ಅವರು ಹೇಳಿದರು. ರಾಜ್ಯ ಸಚಿವರು ಪತ್ರದಲ್ಲಿ ಮಾಡಿರುವ 10 ಆರೋಪಗಳನ್ನು ಉಲ್ಲೇಖಿಸಿ ನಾನು ಪತ್ರದಲ್ಲಿ ಸ್ಪಷ್ಟನೆ ನೀಡಿದ್ದೇನೆ. ಸರ್ವರ ಸಹಭಾಗಿತ್ವಕ್ಕೆ ಸಾಕ್ಷಿಯಾಗಿ ಉದ್ಯೋಗ ಖಾತ್ರಿ ಯೋಜನೆ ಹೆಚ್ಚು ದಿನ ಕೆಲಸ ಮತ್ತು ಹೆಚ್ಚು ಆರ್ಥಿಕ ಶಕ್ತಿಯೊಡನೆ ಬಡ ಕಾರ್ಮಿಕರಿಗೆ ವರದಾನವಾಗಿ ಬಂದಿದೆ. ಆದರೆ ರಾಜ್ಯ ಸರಕಾರ ಕೇಂದ್ರ ಸರಕಾರದ ಬಡವರ ಪರ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಯಾಗದಂತೆ ಅಡ್ಡಗಾಲು ಹಾಕುತ್ತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”


