ಉಡುಪಿ ಜಿಲ್ಲೆಯಲ್ಲಿ ಇನ್ನು ಮುಂದೆ ನೆರಳು ಕೂಡ ಪೋಲಿಸರ ಕಣ್ಗಾವಲಿನಿಂದ ತಪ್ಪಿಸಿಕೊಳ್ಳುವುದು ಕಷ್ಟ..!

ಉಡುಪಿ: ಬೆಳಕಿನ ಜೊತೆಗೆ ಸಾಗುವ ನಿಶ್ಯಬ್ದ ಸಂಗಾತಿಯೇ ನೆರಳು. ಅಪರಾಧ ಜಗ್ಗತ್ತಿನಲ್ಲಿ, ಕ್ರಿಮಿನಲ್ಗಳು ಪೋಲಿಸರ ನೆರಳು ಸೋಕದಂತೆ ಎಸ್ಕೇಪ್ ಆದ ಬಗ್ಗೆ ನಾವು ಕೇಳಿದ್ದೇವೆ. ಇಂದಿಗೂ ಪತ್ತೆಯಾಗದ ಅನೇಕ ಪ್ರಕರಣಗಳ ಕಡತಗಳು ಧೂಳು ತಿನ್ನುತ್ತಿವೆ. ಆದರೆ ಉಡುಪಿ ಜಿಲ್ಲೆಯಲ್ಲಿ ಇನ್ನು ಮುಂದೆ ನೆರಳು ಕೂಡ ಪೋಲಿಸರ ಕಣ್ಗಾವಲಿನಿಂದ ತಪ್ಪಿಸಿಕೊಳ್ಳುವುದು ಕಷ್ಟ..! ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಮುತುವರ್ಜಿಯಲ್ಲಿ ಬನ್ನಂಜೆಯ ಎಸ್ಪಿ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಳವಡಿಸಿದ ಸಿಸಿಟಿವಿಗಳ ಮಾನಿಟರಿಂಗ್ ರೂಮ್ ಸಿದ್ದಗೊಳ್ಳುತ್ತಿದೆ. ಸುಮಾರು ₹ 9 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಈ ರೀತಿಯ ತಂತ್ರಜ್ಞಾನವನ್ನು ಅಳವಡಿಸುತ್ತಿರುವ ರಾಜ್ಯದ ಮೊದಲ ಜಿಲ್ಲೆ ಉಡುಪಿಯಾಗಲಿದೆ. ಕೇಂದ್ರ ಸರಕಾರದ ₹ 5 ಕೋಟಿ, ರಾಜ್ಯ ಸರಕಾರದ ₹ 3 ಕೋಟಿ ಹಾಗು ವಿವಿಧ ಸಂಘ ಸಂಸ್ಥೆ, ಉದ್ಯಮಿಗಳು ನೀಡಿದ ₹ 1 ಕೋಟಿ ಮೊತ್ತದಿಂದ ಎಸ್ಪಿ ಕಚೇರಿಯಲ್ಲಿ ಹೈಟೆಕ್ ಸೆಕ್ಯೂರಿಟಿ ಕೋಣೆಯನ್ನು ನಿರ್ಮಿಸಲಾಗುತ್ತಿದೆ. ಜಿಲ್ಲೆಯಲ್ಲಿ ಅಳವಡಿಸುವ ಒಟ್ಟು 607 ಕ್ಯಾಮೆರಾಗಳನ್ನು ಈ ಕೋಣೆಯಲ್ಲಿ ಗಮನಿಸಲಾಗುತ್ತದೆ. ವೃತ್ತಾಕಾರದ ಕೋಣೆಯ ಅರ್ಧ ವೃತ್ತದಲ್ಲಿ 3 ಸೆಟ್ಗಳಲ್ಲಿ 27 ಟಿವಿಗಳನ್ನು ಅಳವಡಿಸಲಾಗುತ್ತದೆ. ಈ ಟಿವಿಗಳಲ್ಲಿ ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಯ ಸಿಸಿ ಕ್ಯಾಮೆರಾಗಳನ್ನು ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಸಿಬ್ಬಂದಿ ಹಾಗು ತಂತ್ರಜ್ಞಾನರು ಗಮನಿಸುತ್ತಿರುತ್ತಾರೆ. ಸುಮಾರು 6 ಸಿಬ್ಬಂದಿಗಳು ಇಲ್ಲಿ ಕಾರ್ಯಾನಿರ್ವಹಿಸಲಿದ್ದು, ಡಿಎಸ್ಬಿ ಪಿಐ ಹರೀಶ್ ಹಾಗು ಕಂಟ್ರೋಲ್ ರೂಮ್ ಪಿಐ ನೇಮಿನಾಥ್ ಇದರ ಜವಾಬ್ದಾರಿಯನ್ನು ಹೊಂದಿದ್ದಾರೆ.
ಜಿಲ್ಲೆಯ ಗಡಿಭಾಗದ ಚೆಕ್ಪೋಸ್ಟ್, ಪ್ರವಾಸಿ ತಾಣಗಳು, ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ 126 ಎಎನ್ಪಿಆರ್ ( ಆಟೋ ಮ್ಯಾಟಿಕ್ ನಂಬರ್ ಪ್ಲೇಟ್ ರೀಡರ್ ) ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಇದು ವಾಹನ ಸಂಖ್ಯೆ ಹಾಗು ಯಾವ ಭಾಗದಲ್ಲಿ ಸಂಚರಿಸುತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಸಂದೇಶವನ್ನು ನೀಡುತ್ತದೆ. ರಾಷ್ಟ್ರೀಯ ಹೆದ್ದಾರಿಯ 7 ಕಡೆಗಳಲ್ಲಿ ಐಟಿಎಮ್ಎಸ್ ( ಇಂಟೆಲಿಜೆನ್ಸ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ) ಅಳವಡಿಸಲಾಗುತ್ತಿದ್ದು, ಇದು ಒಟ್ಟು 28 ಸಿಸಿ ಕ್ಯಾಮರವನ್ನು ಹೊಂದಿರಲಿದೆ. ಉಳಿದ ಕಡೆಗಳಲ್ಲಿ 100 ಸಾಮಾನ್ಯ ಸಿಸಿಟಿವಿಗಳನ್ನು ಅಳವಡಿಸಲಾಗುತ್ತದೆ.
ಜಿಲ್ಲೆಯಾದ್ಯಂತ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಇನ್ನು ಮುಂದೆ ಪೋಲಿಸರು ರಸ್ತೆಯಲ್ಲಿ ನಿಲ್ಲಿಸಿ ದಂಡ ವಿಧಿಸುವುದಿಲ್ಲ. ಬದಲಾಗಿ ಹೈಟೆಕ್ ಕ್ಯಾಮೆರಾಗಳು ಹೆಲ್ಮೆಟ್ ಧರಿಸದೇ, ಸೀಟ್ ಬೆಲ್ಟ್ ಹಾಕದೇ ವಾಹನ ಚಾಲನೆ ಮಾಡಿದವರ ಮನೆಗೆ ನೋಟಿಸ್ ಬರಲಿದೆ.
ದೆಹಲಿ, ಮುಂಬೈ, ಬೆಂಗಳೂರು ಮಹಾನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳಿಗೆ ವೇಗ ಮಿತಿಯನ್ನು ನಿಗದಿಗೊಳಿಸಲಾಗಿದ್ದು, ಈ ವೇಗ ಮಿತಿಯನ್ನು ಮೀರಿ ಅತೀ ವೇಗದಿಂದ ಚಾಲನೆ ಮಾಡುವ ವಾಹನಗಳನ್ನು ಪತ್ತೆ ಹಚ್ಚಲು ಸ್ಪೀಡ್ ರಾಡಾರ್ ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಇದೇ ಮಾದರಿಯಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ 7 ಕಡೆಗಳಲ್ಲಿ ಅಳವಡಿಸಲಾಗುತ್ತದೆ. ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸುವ ವಾಹನಗಳಿಗೆ ದಂಡದ ನೋಟಿಸ್ ಅವರ ವಿಳಾಸಕ್ಕೆ ತಲುಪಲಿದೆ.
“ವಿಎಮ್ಎಸ್ ( ವರ್ಚುವಲ್ ಮೆಸೇಜ್ ಸಿಸ್ಟಮ್) ಅನ್ನು ಅಳವಡಿಸಲಾಗುತ್ತಿದ್ದು, ಯಾವುದಾದರೂ ಘಟನೆ ನಡೆದ ತಕ್ಷಣ ಎಲ್ಲಾ ಠಾಣೆಗಳಿಗೂ ಮಾಹಿತಿ ರವಾನೆಯಾಗುತ್ತದೆ. ಅಲ್ಲದೇ ಪ್ರಮುಖ ಪ್ರವಾಸಿ ತಾಣ, ನಗರಗಳಿಗೆ ಎಷ್ಟು ದೂರ ಹಾಗು ಯಾವ ದಿಕ್ಕಿಗೆ ಚಲಾಯಿಸಬೇಕು ಎಂಬ ಮಾಹಿತಿಯನ್ನು ಅಳವಡಿಸಲಾಗುತ್ತಿದೆ. ಅಲ್ಲದೇ ಪ್ರಮುಖ ನಗರ ಹಾಗು ಪ್ರವಾಸಿ ತಾಣಗಳಿಗೆ ತೆರಳುವ ಮಾರ್ಗಸೂಚಿಯನ್ನು ಹೊಂದಿರಲಿದೆ. ”
“ಶಿಕ್ಷಣ ಕಾಶಿ, ಸಾಂಸ್ಕೃತಿಕ ನಗರಿ ಉಡುಪಿ ಜಿಲ್ಲೆಗೆ ಹೈ ಸೆಕ್ಯುರಿಟಿ ನೀಡುವ ಯೋಜನೆಯೇ "ಶ್ಯೇನಾ ದೃಷ್ಟಿ". ಆರಂಭಿಕವಾಗಿ ಉಡುಪಿ ನಗರ ಠಾಣೆಯಲ್ಲಿ ಈ ಯೋಜನೆಯಲ್ಲಿ ಆರಂಭಿಸಲಾಗಿತ್ತು. ಈಗ ಯೋಜನೆಯನ್ನು ಜಿಲ್ಲೆಯಾದ್ಯಂತ ವಿಸ್ತರಿಸುತ್ತಿದ್ದೇವೆ. ಕೇಂದ್ರ, ರಾಜ್ಯ ಸರಕಾರ ಹಾಗು ಸ್ಥಳೀಯ ಉದ್ಯಮಿ, ಸಂಘ ಸಂಸ್ಥೆಗಳ ಸಹಕಾರದಿಂದ ಯೋಜನೆಯ ಕಾಮಗಾರಿ ಆರಂಭವಾಗಿದೆ. ಇದು ಉಡುಪಿ ಜಿಲ್ಲೆಯ ಜನತೆಯ ಸುರಕ್ಷತೆಗಾಗಿ ಮಾಡಿರುವ ಯೋಜನೆ. ಹರಿರಾಮ್ ಶಂಕರ್, ಜಿಲ್ಲಾ ಎಸ್ಪಿ, ಉಡುಪಿ. ”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”