ಎ. 10 ರಿಂದ 12 ರವರೆಗೆ ಅಣಕು ನ್ಯಾಯಾಲಯ ಸ್ಪರ್ಧೆ

ಉಡುಪಿ: ಇಲ್ಲಿನ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಉಡುಪಿಯ ಪ್ರತಿಷ್ಠಿತ ವಕೀಲ ಪಿ. ಶಿವಾಜಿ ಶೆಟ್ಟಿ ಸ್ಮಾರಕ 10ನೇ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಎ. 10 ರಿಂದ 12 ರವರೆಗೆ ಆಯೋಜಿಸಲಾಗುತ್ತಿದೆ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲೆ ಪ್ರೋ.ಸುರೇಖಾ ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ವಿವರಿಸಿದರು. ಎ.10 ರ ಮಧಾಹ್ನ 2.30 ಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾ| ಎಂ.ಜಿ.ಉಮಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಆಲೆಯನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. (ಡಾ.) ಪ್ರಕಾಶ್ ಕಣಿವೆ, ಡಾ. ಟಿಎಂಎ ಪೈ ಪ್ರತಿಷ್ಠಾನದ ಮುಖ್ಯಸ್ಥ ಟಿ.ಅಶೋಕ ಪೈ ಹಾಗೂ ದಿ.ಪಿ. ಶಿವಾಜಿ ಶೆಟ್ಟಿಯವರ ಧರ್ಮಪತ್ನಿ ಜಯಂತಿ ಪಿ. ಶಿವಾಜಿ ಶೆಟ್ಟಿ ಉಪಸ್ಥಿತರಿರಲಿದ್ದಾರೆ. ಎ.12 ರಂದು ಸಮಾರೋಪ ಸಮಾರಂಭಕ್ಕೆ ರಾಜ್ಯ ಹೈಕೋರ್ಟಿನ ನ್ಯಾ| ಎಸ್. ವಿಶ್ವಜಿತ್ ಶೆಟ್ಟಿ, ದೆಹಲಿಯ ಆದಾಯ ತೆರಿಗೆ ನ್ಯಾಯ ಮಂಡಳಿಯ ನ್ಯಾಯಿಕ ಸದಸ್ಯ ಯೊಗೇಶ್ ಕುಮಾರ್ ಯು.ಎಸ್, ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಪ್ರೊ.(ಡಾ.) ಚಿದಾನಂದ ರೆಡ್ಡಿ ಎಸ್. ಪಾಟೀಲ್, ಡಾ.ಟಿಎಮ್ಎ ಪೈ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಸಚಿನ್ ಪೈ ಭಾಗವಹಿಸುತ್ತಿದ್ದಾರೆ. ಪ್ರತಿಷ್ಠಿತ ಸ್ಪರ್ಧೆಯಲ್ಲಿ ಹೊರರಾಜ್ಯದ ಪುಣೆ, ಕೇರಳ, ತೆಲಂಗಾಣ ಸೇರಿದಂತೆ ಒಟ್ಟು 28 ತಂಡಗಳು ಭಾಗವಹಿಸುತ್ತಿವೆ. ಈ ಸ್ಪರ್ಧೆಯಲ್ಲಿ ಕಾನೂನು ರಸಪ್ರಶ್ನೆ ಸ್ಪರ್ಧೆ ಹಾಗೂ ತೀರ್ಪು ಬರೆಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ ಪ್ರಥಮ, ದ್ವೀತಿಯ ಸೇರಿದಂತೆ ಉತ್ತಮ ಯುವಕ/ಯುವತಿ ವಕೀಲರು, ಉತ್ತಮ ತೀರ್ಪು ಬರವಣಿಗೆ, ಕ್ವಿಝ್ ಸ್ಪರ್ಧೆಗೆ ನಗದು ಬಹುಮಾನ ಹಾಗು ಪಾರಿತೋಷಕ ಇದೆ. ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಡಾ.ಪ್ರೀತಿ ಹರೀಶ್ರಾಜ್, ಅಣಕು ನ್ಯಾಯಾಲಯ ಮುಖ್ಯಸ್ಥ ಶ್ರೀನಿವಾಸ್ ಪ್ರಸಾದ್, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಕೀಲ ಶ್ರೀಧರ್ ಪಿ.ಎಸ್, ವಕೀಲ ದಿ.ಪಿ.ಶಿವಾಜಿ ಶೆಟ್ಟಿಯವರ ಧರ್ಮಪತ್ನಿ ಜಯಂತಿ.ಪಿ ಶೆಟ್ಟಿ ಉಪಸ್ಥಿತರಿದ್ದರು.
“ಎ.20 & 21 ರಂದು "ಪುನಶ್ಚತನ್ಯಕಾರಿ ನ್ಯಾಯ ಸುಸ್ಥಿರತೆ ಮತ್ತು ಹವಾಮಾನ ಕ್ರಮ" ಎಂಬ ವಿಷಯದ ಮೇಲೆ ಎರಡು ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್, ಮಣಿಪಾಲದ ಸ್ಕೂಲ್ ಆಫ್ ಆರ್ಕಿಟೆಕ್ಟ್ ಆ್ಯಂಡ್ ಪ್ಲಾನಿಂಗ್, ಮಾಹೆ ಹಾಗೂ ಮೈಸೂರಿನ ಜೆ.ಎಸ್.ಎಸ್ ಕಾನೂನು ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ. ನ್ಯಾಷನಲ್ ಲಾ ಸ್ಕೂಲ್ನ ಪ್ರೊ.(ಡಾ.) ಸಾಯಿರಾಮ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೀನ್ಯಾ ಸ್ಕೂಲ್ ಆಫ್ ಲಾ ಪ್ರಾಧ್ಯಾಪಕರಾದ ಪ್ರೊ.ಜ್ಯಾಕಲಿನ್ ಮೆಹೇನ್ನಾರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ”
“ಮೇ. 09 ರಿಂದ 15 ರವರೆಗೆ ಗೋಳಿಯಂಗಡಿಯಲ್ಲಿ ವಾರ್ಷಿಕ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಸ್ವಚ್ಚತೆ, ಕಾನೂನಿನ ಅರಿವು ಮತ್ತು ನೆರವು ಹಾಗೂ ಇತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮೇ 26 ರಂದು ಡಾ.ಟಿ.ಎಂ.ಎ.ಪೈ ದತ್ತಿ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ನ ನಿವೃತ್ತ ಪ್ರಾಧ್ಯಾಪಕರಾದ ಎಚ್.ಕೆ. ನಾಗರಾಜ್ರವರು ಉಪನ್ಯಾಸ ನೀಡಲಿದ್ದಾರೆ. ”
“ನೀವು ತಪ್ಪಿಸಿಕೊಂಡಿರಬಹುದಾದ ಆಯ್ದ ಸುದ್ದಿಗಳು.”